ಸಾವರ್ಕರ್ ಕುರಿತ ರಾಹುಲ್ ಹೇಳಿಕೆಗೆ ಧನ್ಯವಾದ ಹೇಳಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

ಸಾವರ್ಕರ್ ಕುರಿತ ರಾಹುಲ್ ಹೇಳಿಕೆಗೆ ಧನ್ಯವಾದ ಹೇಳಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?

ಮುಂಬೈ: ಸಾವರ್ಕರ್ ಕುರಿತಂತೆ ಕಾಂಗ್ರೆಸ್ (Congress) ಮುಖಂಡ ರಾಹುಲ್‌ಗಾಂಧಿ ನೀಡಿದ ಹೇಳಿಕೆಗೆ ನಾವು ಅವರಿಗೆ ಧನ್ಯವಾದ ಹೇಳಬೇಕು. ಏಕೆಂದರೆ ಸಾವರ್ಕರ್ ಅವರ ಸಂದೇಶವನ್ನು ಪ್ರತಿ ಮನೆಗೆ ತಲುಪಿಸಲು ಅವರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಶ್ಲೇಷಿಸಿದ್ದಾರೆ.

"ಪ್ರತಿ ಮನೆಗೆ ಸತ್ಯ ಮತ್ತು ಸಾವರ್ಕರ್ ಚಿಂತನೆಯನ್ನು ತಲುಪಿಸುವ ಅವಕಾಶ ನೀಡಿದ್ದಕ್ಕಾಗಿ ರಾಹುಲ್‌ಗೆ ನಾವು ಕೃತಜ್ಞತೆ ಹೇಳಬೇಕು. ರಾಹುಲ್‌ಗಾಂಧಿ ಇದನ್ನು ಮುಂದುವರಿಸಲಿ" ಎಂದು ಅವರು ವ್ಯಂಗ್ಯವಾಡಿದ್ದಾರೆ. ರಾಹುಲ್ ಹೇಳಿಕೆ ವಿರುದ್ಧ ನಾಗ್ಪುರದಲ್ಲಿ ನಡೆದ ಸಾವರ್ಕರ್ ಗೌರವ ಯಾತ್ರೆಯಲ್ಲಿ ಮಾತನಾಡಿದ ಅವರು ಮೇಲಿನಂತೆ ನುಡಿದರು.

ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಒಳಗಾಗಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ಪ್ರತಿಕ್ರಿಯಿಸಿದ ರಾಹುಲ್, "ನಾನು ಕ್ಷಮೆ ಯಾಚಿಸುವುದಿಲ್ಲ' ಏಕೆಂದರೆ ನಾನು ಸಾವರ್ಕರ್ ಅಲ್ಲ" ಎಂದು ಗುಡುಗಿದ್ದರು.

ಈ ಸಂಬಂಧ ರಾಹುಲ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ ಗಡ್ಕರಿ, "ಸಾವರ್ಕರ್ ಬಗೆಗೆ ಇಂದಿರಾಗಾಂಧಿ, ಅಜ್ಜ ಫಿರೋಝ್ ಗಾಂಧಿ ಏನು ಹೇಳಿದ್ದಾರೆ ಎನ್ನುವುದನ್ನು ರಾಹುಲ್ ಓದಿಲ್ಲ" ಎಂದು ಚುಚ್ಚಿದರು. ಹಿಂದುತ್ವ ಹೇಗೆ ಜೀವನ ವಿಧಾನವಾಗಬೇಕು ಎನ್ನುವುದನ್ನು ತೋರಿಸಿಕೊಟ್ಟವರು ಸಾವರ್ಕರ್ ಎಂದು ಗಡ್ಕರಿ ಅಭಿಪ್ರಾಯಪಟ್ಟರು. ರಾಹುಲ್‌ ಗಾಂಧಿಯವರು ಮಾಡಿದ ಅವಮಾನದಿಂದ ಸಾವರ್ಕರ್ ಸಣ್ಣವರಾಗುವುದಿಲ್ಲ ಎಂದು ತಿರುಗೇಟು ನೀಡಿದರು.