ಸಲ್ಮಾನ್‌ ಖಾನ್ ಬರ್ತ್‌ ಡೇ ವಿಶ್‌ ಗೆ ನೂಕುನುಗ್ಗಲು: ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್

ಸಲ್ಮಾನ್‌ ಖಾನ್ ಬರ್ತ್‌ ಡೇ ವಿಶ್‌ ಗೆ ನೂಕುನುಗ್ಗಲು: ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್

ಮುಂಬಯಿ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ಮಂಗಳವಾರ (ಡಿ.27 ರಂದು) ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬಿಟೌನ್‌ ಸೆಲೆಬ್ರಿಟಿಗಳು ಟೈಗರ್‌ ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿ ನಟನಿಗೆ ವಿಶ್‌ ಮಾಡಿದ್ದಾರೆ.

ಸಲ್ಮಾನ್‌ ಖಾನ್‌ ಗೆ ಬಹುದೊಡ್ಡ ಅಭಿಮಾನಿ ವರ್ಗವಿದೆ. ಪ್ರತಿವರ್ಷ ಅವರ ಹುಟ್ಟುಹಬ್ಬಕ್ಕೆ ರಾತ್ರಿಯೇ ಸಾಲಿನಲ್ಲಿ ನಿಂತು ಕಾದು ಕುಳಿತುಕೊಳ್ಳುವ ಅಭಿಮಾನಿಗಳಿದ್ದಾರೆ. ಮಂಗಳವಾರವೂ ಹೀಗೆ ಸಾವಿರಾರು ಮಂದಿ ಅಭಿಮಾನಿಗಳು ಸಲ್ಮಾನ್‌ ಅವರ ಹುಟ್ಟು ಹಬ್ಬಕ್ಕೆ ವಿಶ್‌ ಮಾಡಲು ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿದ್ದರು.

ಪೋಸ್ಟರ್‌, ಬ್ಯಾನರ್‌ ಗಳನ್ನು ಹಿಡಿದು ಘೋಷಣೆ ಕೂಗಿದ್ದಾರೆ. ತಮ್ಮ ಗ್ಯಾಲಕ್ಸಿ ನಿವಾಸದಲ್ಲಿ ಸಲ್ಮಾನ್‌ ಖಾನ್‌ ಅವರು ಅಭಿಮಾನಿಗಳತ್ತ ಕೈ ಬೀಸಿ ಎಲ್ಲರಿಗೂ ಥ್ಯಾಂಕ್ಯೂ ಹೇಳಿದ್ದಾರೆ. ಈ ವೇಳೆ ಅಭಿಮಾನಿಗಳು ಖುಷಿಯಿಂದ ಆಳವಡಿಸಿದ ಬ್ಯಾರಿಕೇಡ್‌ ಗಳನ್ನು ದಾಟಿ ಮುಂದೆ ಬರಲು ಯತ್ನಿಸಿದ್ದಾರೆ.

ಯಾವಾಗ ಅಭಿಮಾನಿಗಳ ದಂಡು ಹೆಚ್ಚಾಗಿ ಬ್ಯಾರಿಕೇಡ್‌ ಮುರಿದು ನುಗ್ಗಲು ಯತ್ನಸಿದ್ದಾರೋ ಆ ವೇಳೆ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಲಾಠಿ ಚಾರ್ಜ್‌ ನಡೆಸಿದ್ದಾರೆ. ಲಾಠಿ ಚಾರ್ಜ್‌ನ ವೇಳೆ ಅಭಿಮಾನಿಗಳ ಚಪ್ಪಲಿ, ಬ್ಯಾಗ್‌ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

ಬರ್ತ್‌ ಡೇ ವೇಳೆ ಆದ ಈ ನೂಕುನುಗ್ಗಲಿನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಭಿಮಾನಿಗಳ ಮೇಲೆ ಈ ರೀತಿ ಲಾಠಿ ಚಾರ್ಚ್‌ ಮಾಡುವುದು ಸರಿಯಲ್ಲ ನೆಟ್ಟಿಗರು ಕಿಡಿಕಾರಿದ್ದಾರೆ. ಇನ್ನು ಕೆಲವರು ಇವರೆಲ್ಲಾ ಕೆಲಸವಿಲ್ಲದವರು, ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಟಾಂಗ್‌ ಕೊಟ್ಟಿದ್ದಾರೆ.

ಸಲ್ಮಾನ್‌ ಖಾನ್‌ ಬರ್ತ್‌ ಡೇ ಪಾರ್ಟಿ ಅವರ ತಂಗಿ ಅರ್ಪಿತಾ ಅವರ ನಿವಾಸದಲ್ಲಿ ಆಯೋಜಿಸಲಾಗಿತ್ತು. ಶಾರುಖ್‌ ಖಾನ್‌, ಸಂಗೀತಾ ಬಿಜಲಾನಿ, ರಿತೇಶ್ ದೇಶಮುಖ್, ಜೆನಿಲಿಯಾ ಡಿಸೋಜಾ, ತಬು, ಕಾರ್ತಿಕ್ ಆರ್ಯನ್ ಮುಂತಾದ ನಟರು ಭಾಗಿಯಾಗಿದ್ದರು.