ವಿಮೆ ಹಣಕ್ಕಾಗಿ ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಂದು ಹೊಲದಲ್ಲಿ ಹೂತಾಕಿದ ವ್ಯಕ್ತಿ

ವಿಮೆ ಹಣಕ್ಕಾಗಿ ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಂದು ಹೊಲದಲ್ಲಿ ಹೂತಾಕಿದ ವ್ಯಕ್ತಿ

ಜಾರ್ಖಂಡ್‌: ಜಾರ್ಖಂಡ್‌ನ ಗುಮ್ಲಾ ನಗರದಲ್ಲಿ ಆಸ್ತಿ ವಿವಾದ ಮತ್ತು ವಿಮೆ ಹಣಕ್ಕಾಗಿ ಬುಧವಾರ ರಾತ್ರಿ ಅನೋಸ್ ಕಂದುಲ್ನಾ ಎಂಬ ವ್ಯಕ್ತಿ ತನ್ನ ಅತ್ತಿಗೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಕೊಂದಿರುವ ಘಟನೆ ನಡೆದಿದೆ.

ಕುಡಿದ ಅಮಲಿನಲ್ಲಿದ್ದ ಅನೋಸ್ ಕಂದುಲ್ನಾ ತನ್ನ ಅತ್ತಿಗೆ ಪೂನಂ ಕಂದುಲ್ನಾ (35) ಮೇಲೆ ಹಲ್ಲೆ ನಡೆಸಿದ್ದಾನೆ.

ಈ ವೇಳೆ, ಪೂನಂ ಅವರ ಇಬ್ಬರು ಚಿಕ್ಕ ಮಕ್ಕಳು ತಮ್ಮ ತಾಯಿಯನ್ನು ಉಳಿಸಲು ಪ್ರಯತ್ನಿಸಿದಾಗ, ಅವರ ಮೇಲೂ ಆತ ಹಲ್ಲೆ ನಡೆಸಿ ಕೊಂದಿದ್ದಾನೆ.

2017 ರಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಪೂನಂ ತನ್ನ ಇಬ್ಬರು ಪುತ್ರರಾದ ಪವನ್ ಮತ್ತು ಅರ್ಪಿತ್ ಮತ್ತು ಸೋದರ ಮಾವ ವಿಶ್ರಮ್ ಅವರೊಂದಿಗೆ ಲುಂಗಾಟು ಪದ್ರಾ ಟೋಲಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಆಕೆಯ ಅತ್ತೆ ಮತ್ತು ಅನೋಸ್ ಕಂದುಲ್ನಾ ಅದೇ ಗ್ರಾಮದ ಹತ್ತಿರದ ಮನೆಯಲ್ಲಿ ವಾಸಿಸುತ್ತಿದ್ದರು.

ಪೂನಂ ಮತ್ತು ಆಕೆಯ ಇಬ್ಬರು ಪುತ್ರರನ್ನು ಕೊಲೆ ಮಾಡಿದ ನಂತರ, ದುಷ್ಕರ್ಮಿಯು ಮೂರು ಮೃತದೇಹಗಳನ್ನು ಮನೆಯಿಂದ ಸುಮಾರು 100 ಮೀಟರ್ ದೂರದ ಹೊಲದಲ್ಲಿ ಹೂತು ಹಾಕಿದ್ದಾನೆ. ಕುಟುಂಬವು ಹಲವಾರು ದಿನಗಳಿಂದ ನಾಪತ್ತೆಯಾಗಿರುವುದನ್ನು ಕಂಡು, ಪೂನಂ ಅವರ ಸೋದರ ಮಾವ ವಿಶ್ರಮ್ ಕಂದುಲಾನ ಅವರು ಕಾಣೆಯಾದ ಕುಟುಂಬದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ತನಿಖೆಯ ವೇಳೆ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದ್ದು, ಸದ್ಯ ಪೊಲೀಸ್ ವಶದಲ್ಲಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್ ಛೋಟು ಓರಾನ್ ತಿಳಿಸಿದ್ದಾರೆ.