ವಿದ್ಯುತ್, ನೀರಿನ ಸಮಸ್ಯೆಯಿಂದ ತತ್ತರಿಸುತ್ತಿರುವ ಪಶ್ಚಿಮ ಬೆಂಗಳೂರು- ಯಾವ ಪ್ರದೇಶಗಳು? ವರದಿ, ವಿವರ

ಬೆಂಗಳೂರು, ಮಾರ್ಚ್ 18: ಪಶ್ಚಿಮ ಬೆಂಗಳೂರಿನ ಬಹುತೇಕ ನಿವಾಸಿಗಳು ಈ ಬೇಸಿಗೆಯಲ್ಲಿ ವಿದ್ಯುತ್ ಕಡಿತ ಮತ್ತು ನೀರಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಎರಡು ದಿನಗಳಿಂದ ಪೀಣ್ಯ, ವಿಜಯನಗರ ಹಾಗೂ ಬ್ಯಾಡರಹಳ್ಳಿ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿರುವುದು ವರದಿಯಾಗಿದೆ.
ಈ ಕುರಿತು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ. 'ನಾವು ಒಂದು ಗಂಟೆ ವಿದ್ಯುತ್ ಪಡೆದ ನಂತರ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ವಿದ್ಯುತ್ ಕಡಿತವಾಗುತ್ತಿದೆ. ಇದು ಎರಡು ದಿನಗಳ ಕಾಲ ಮುಂದುವರಿದಿದೆ. ನೀರನ್ನು ಪಂಪ್ ಮಾಡಲು ಸಾಧ್ಯವಾಗದೆ, ಸಂಪೂರ್ಣ ಅಸಹಾಯಕರಾಗಿದ್ದೇವೆ' ಎಂದು ನಾಗರಭಾವಿ ನಿವಾಸಿ ಮಾಯಾಂಕ್ ಕೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ರೈತರಿಗೆ ಅನುಕೂಲವಾಗುವಂತೆ ಮುಂದಿನ ಮೂರು ತಿಂಗಳು ವಿದ್ಯುತ್ ಕಡಿತಗೊಳಿಸುವುದಿಲ್ಲ ಎಂದು ಇಂಧನ ಇಲಾಖೆ ಘೋಷಿಸಿದ ಒಂದು ದಿನದ ನಂತರ ವಿದ್ಯುತ್ ಕಡಿತವಾಗುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಸರ್ಕಾರಿ ನೀರು ವಿತರಕರು ಹೆಚ್ಚಿನ ಬೆಲೆಗೆ ನೀರನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. 'ನಾವು ನೀರನ್ನು ಪಂಪ್ ಮಾಡಲು ಸಾಧ್ಯವಾಗದ ಕಾರಣ, ನೀರನ್ನು ಖರೀದಿಸುವಂತೆ ನಮ್ಮ ಮೇಲೆ ಒತ್ತಡ ಹೇರಲಾಯಿತು. ವಿದ್ಯುತ್ ಕಡಿತದಿಂದ ನೀರು ಕೊಡುವವರು ಕ್ಯಾನ್‌ಗೆ 15-20 ರೂ. ತೆಗೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ದಿನದಲ್ಲಿ 5 ರೂ.ಗೆ ದರ ವಿಧಿಸುತ್ತಿದ್ದು, ಜನರು ಕಳ್ಳ ಮಾರ್ಗದಲ್ಲಿ ನೀರು ಮಾರಾಟ ಮಾಡುತ್ತಿದ್ದಾರೆ' ಎಂದು ಮಾಗಡಿ ರಸ್ತೆ ನಿವಾಸಿ ಸುಜಾತಾ ಎಂ. ಆರೋಪಿಸಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಬೆಂಗಳೂರು ವಿದ್ಯುತ್ ನಿಗಮ ನಿಯಮಿತದ ಅಧಿಕಾರಿಗಳು ತಾಂತ್ರಿಕ ಸಮಸ್ಯೆಗಳಿಂದ ಪೀಣ್ಯ- ಬೈದರಹಳ್ಳಿ ಮಾರ್ಗದಲ್ಲಿ 66ಕೆವಿ ಲೈನ್ ತುಂಡಾಗಿ ಕಂಡಕ್ಟರ್‌ಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ತಂತ್ರಜ್ಞಾನ ಹೊಸದಾಗಿರುವ ಕಾರಣ ದುರಸ್ತಿಗೆ ಸಮಯ ಹಿಡಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಗಾರು ಪೂರ್ವದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.
ಬೆಂಗಳೂರಿನಲ್ಲಿ ಮಾರ್ಚ್ 16 ರ ಗುರುವಾರದಿಂದ ಕೆಲವು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬುಧವಾರದಂದು ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಮಳೆಯಾಗಿದ್ದರೆ, ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯ ವೇಳೆಯಲ್ಲಿ ಭಾರೀ ಮಳೆಯಾಗಿದೆ.
ಇಂದು (ಶನಿವಾರ) ಸಹ ನಗರದಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆ ಮಳೆಯಾಗುವ ಸಾಧ್ಯತೆಯಿದೆ. ಇದೇ ರೀತಿಯ ಪರಿಸ್ಥಿತಿಗಳು ಮಾರ್ಚ್ 19 ರ ವರೆಗೆ ಇರಲಿದೆ ಎಂದು ಬೆಂಗಳೂರಿನ ಐಎಂಡಿ (ಭಾರತೀಯ ಹವಾಮಾನ ಇಲಾಖೆ) ಮುನ್ಸೂಚನೆ ನೀಡಿದೆ.
'ಬೆಳಿಗ್ಗೆ ಜಾವದಲ್ಲಿ ಭಾಗಶಃ ಮೋಡ ಕವಿದ ವಾತವಾರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಾಗಿದ್ದು, ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ' ಎಂದು ಹವಾಮಾನ ಇಲಾಖೆಯ ವಕ್ತಾರರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರದವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು IMD ಹೇಳಿದೆ ಮುನ್ಸೂಚನೆಯ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ, ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.