ರಾಷ್ಟ್ರೀಯ ನಾಯಕರನ್ನು ಕರೆತಂದು ಸಾಲು ಸಾಲು ಸಮಾವೇಶ ನಡೆಸಲು ಬಿಜೆಪಿ ಸಿದ್ಧತೆ

ಬೆಂಗಳೂರು,ನ.18 ; ಬರಲಿರುವ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ , ಸಾಲು ಸಾಲು ಸಮಾವೇಶಗಳನ್ನು ನಡೆಸಿ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲು ಮುಂದಾಗಿದೆ. ಭಾನುವಾರ ಬಳ್ಳಾರಿಯಲ್ಲಿ ನಡೆಯಲಿರುವ ಎಸ್ಸಿ ಮೋರ್ಚಾದ ನವಶಕ್ತಿ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರು ಸೇರಿದಂತೆ ಮತ್ತಿತರರು ಆಗಮಿಸಲಿದ್ದಾರೆ
ಡಿಸೆಂಬರ್‍ನಲ್ಲಿ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಬಳಿ ರಾಷ್ಟ್ರೀಯ ಲಂಬಾಣಿ ಸಮಾವೇಶ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸುವ ನಿರೀಕ್ಷೆ ಇದೆ.
ಗುಜರಾತ್ ಮತ್ತು ಹಿಮಾಚಲಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಡಿ.8ರಂದು ಹೊರಬೀಳಲಿದ್ದು, ಬಿಜೆಪಿ ಪುನಃ ಇಲ್ಲಿ ಅಧಿಕಾರಕ್ಕೆ ಬಂದರೆ ಬಳಿಕ ರಾಷ್ಟ್ರೀಯ ನಾಯಕರ ಚಿತ್ತ ಕರ್ನಾಟಕದತ್ತ ಹರಿಸಲಿದ್ದಾರೆ.
ಪ್ರತಿ 15 ದಿನಗಳಿಗೊಮ್ಮೆ ಕಂದಾಯ ಹೋಬಳಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಾತಿವಾರು, ವಿವಿಧ ಮೋರ್ಚಾಗಳ ಸಮಾವೇಶವನ್ನು ನಡೆಸಿ ಮತದಾರರನ್ನು ಪಕ್ಷದತ್ತ ಸೆಳೆಯುವುದು ಬಿಜೆಪಿ ಲೆಕ್ಕಾಚಾರವಾಗಿದೆ
ಈಗಾಗಲೇ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿ ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಗೆ ಲಗ್ಗೆ ಹಾಕಲು ಬಿಜೆಪಿ ಮುಂದಾಗಿದೆ. ಕರಾವಳಿ, ಮಧ್ಯಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಯ ಪ್ರಾಬಲ್ಯ ಈಗಲೂ ಜೋರಾಗಿದ್ದು, ಇಲ್ಲಿ ಸಂಘಟನೆಗೆ ಸಮಸ್ಯೆ ಇಲ್ಲ.
ಹಳೆ ಮೈಸೂರು ಭಾಗವಾದ ಚಾಮರಾಜನಗರ, ಮೈಸೂರು, ಹಾಸನ, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತಿತರ ಕಡೆ ಬಿಜೆಪಿ ಮೋದಿ ಅವರನ್ನು ಕರೆಸಿ ಹೆಚ್ಚು ಸಮಾವೇಶ ನಡೆಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಈ ಭಾಗದಲ್ಲಿ ಕನಿಷ್ಠ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದು. ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಆಪರೇಷನ್ ಕಮಲ, ಪಕ್ಷೇತರ ಶಾಸಕರ ಮೇಲೆ ಅವಲಂಬಿತವಾಗಬೇಕಾಗುತ್ತದೆ.
ಬದಲಿಗೆ ಮೈಸೂರು ಭಾಗದಲ್ಲಿ ಒಂದಿಷ್ಟು ಪರಿಶ್ರಮ ಹಾಕಿದರೆ ಸರಳ ಬಹುಮತ ಪಡೆಯಬಹುದು ಎಂಬ ಚಿಂತನೆ ಬಿಜೆಪಿಯಲ್ಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಮುನಿಸಿಕೊಂಡಿರುವ ಹಾಗೂ ಟಿಕೆಟ್ ವಂಚಿತರನ್ನು ಕರೆತಂದು ಅವರನ್ನೇ ಅಭ್ಯರ್ಥಿ ಮಾಡಿದರೆ ಸುಲಭವಾಗಿ ಅಧಿಕಾರ ಹಿಡಿಯಬಹುದು ಎಂಬ ರಣತಂತ್ರಗಳನ್ನು ರೂಪಿಸಲಾಗಿದೆ.
ಲೋಕಸಭೆ ಮತ್ತು ವಿಧಾನಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಈ ಭಾಗದಲ್ಲಿ ಈಗಾಗಲೇ ತನ್ನ ಶಕ್ತಿಯನ್ನು ಪ್ರದರ್ಶಿಸಿರುವುದರಿಂದ ಸಂಘಟನೆಯನ್ನು ಬಲಪಡಿಸಿದರೆ 89 ಕ್ಷೇತ್ರಗಳಲ್ಲಿರುವ ಹಳೇ ಮೈಸೂರಿನಲ್ಲಿ 30 ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಚಿಂತಕರ ಛಾವಡಿ ನೀಡಿರುವ ಸಲಹೆ.
ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಎಸ್ಸಿ ಸಮಾವೇಶ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ ಸೇರಿದಂತೆ ಹಲವು ಕಡೆ ಸಮಾವೇಶಗಳನ್ನು ನಡೆಸಿ ಚುನಾವಣೆಗೆ ರಣ ಕಹಳೆ ಮೊಳಗಿಸಲಿದೆ.ಗುಜರಾತ್ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕಕ್ಕೆ ಬಂದು ಹೆಚ್ಚು ಹೆಚ್ಚು ಪ್ರಚಾರ ನಡೆಸುವುದಾಗಿ ಖುದ್ದು ಪ್ರಧಾನಿಯವರೇ ಹೇಳಿದ್ದಾರೆ. ಬಿಜೆಪಿ ಕೂಡ ಮೋದಿಯವರ ನಾಮಬಲವನ್ನೇ ಮೆಚ್ಚಿಕೊಂಡಿರುವುದರಿಂದ ಬರುವ ದಿನಗಳಲ್ಲಿ ಕೇಸರಿ ಪಡೆ ಹಿಂದೆಂದಿಗಿಂತಲೂ ಅಬ್ಬರದ ಪ್ರಚಾರ ನಡೆಸಲು ಮುಂದಾಗಿದೆ.