ರಾಜ್ಯಕ್ಕೆ `ಹೀಟ್ ವೇವ್' ಆತಂಕ : ಸುಡುಬಿಸಿಲಿಗೆ ಜನರು ತತ್ತರ
ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ದಿನದಿಂದ ದಿನಕ್ಕೆ ಸುಡುಬಿಸಿಲು ಹೆಚ್ಚುತ್ತಿದ್ದು, ಉಷ್ಣ ಮಾರುತ ಆತಂಕ ಶುರುವಾಗಿದೆ.ಈ ಬಾರಿ ವಾಡಿಕೆಗಿಂತ ಹೆಚ್ಚು ಬಿಸಿಲು ಇದ್ದು, ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಶನಿವಾರ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 38-39 ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾದರೆ, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 34-36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ.
ಏಪ್ರಿಲ್ 3ನೇ ವಾರದಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಏಪ್ರಿಲ್ ಮೊದಲನೇ ವಾರದಲ್ಲಿ ಅಧಿಕವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಒಳನಾಡಿನ ಭಾಗದಲ್ಲಿ ಈ ಬಾರಿ ಚಳಿಯ ವಾತಾವರಣ ಹೆಚ್ಚಿತ್ತು. ಹಾಗೆಯೇ ಬೇಸಿಗೆಯ ಬಿಸಿಲಿನ ತಾಪವೂ ಹೆಚ್ಚಾಗಲಿದೆ.
ಕಲಬುರಗಿ, ಬೀದರ್, ವಿಜಯಪುರ, ರಾಯಚೂರು, ಬಳ್ಳಾರಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಅಸುಪಾಸಿನಲ್ಲಿರುತ್ತದೆ. ಆದರೆ, ಈ ಬಾರಿ ಅದು 45-46 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಜಿಲ್ಲೆಗಳಲ್ಲಿ 36-38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಸರಾಸರಿ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಗೆಯಾಗುವ ಸಾಧ್ಯತೆ ಇದೆ.