ಮೊಬೈಲ್ ಕಳೆದುಕೊಂಡರೆ ಇನ್ನು ಮುಂದೆ ಹೆದರಬೇಕಿಲ್ಲ ಯಾಕೆ ಗೊತ್ತಾ

ಮೊಬೈಲ್ ಕಳೆದುಕೊಂಡರೆ ಇನ್ನು ಮುಂದೆ ಹೆದರಬೇಕಿಲ್ಲ  ಯಾಕೆ ಗೊತ್ತಾ

ದಗ ಪೊಲೀಸ್​ ಇಲಾಖೆಯಿಂದ ಮೊಬಿಫೈ ಆಯಪ್​ ಸಿದ್ಧ- ಕಳೆದು ಹೋದ ಮೊಬೈಲ್​ ಹುಡುಕಲು ತಾಂತ್ರಿಕ ವ್ಯವಸ್ಥೆ - ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಮಾಹಿತಿ

ಗದಗ: "ಮೊಬೈಲ್ ಕಳೆದುಕೊಂಡರೆ ಇನ್ನು ಮುಂದೆ ಹೆದರಬೇಕಿಲ್ಲ. ಕಳೆದುಹೋದ ಮೊಬೈಲ್​ಗಳನ್ನು ಹುಡುಕಿಕೊಡುವ ತಾಂತ್ರಿಕ ವ್ಯವಸ್ಥೆಯೊಂದನ್ನು ನಮ್ಮ ಪೊಲೀಸ್ ಇಲಾಖೆಯಿಂದ ಮಾಡಲಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ತಿಳಿಸಿದರು.

ಈ ಬಗ್ಗೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಬೈಲ್ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು? ಎಂಬ ಕೆಲವು ಮಾಹಿತಿಯನ್ನು ನೀಡಿದರು.

"ಇಲಾಖೆಯು 'ಮೊಬಿಫೈ (MobiFi)' ಎಂಬ ಹೊಸದೊಂದು ಆಯಪ್ ಸಿದ್ದಪಡಿಸಿದ್ದು ತಂತ್ರಾಂಶದ ಮೂಲಕ ಕಳೆದು ಹೋದ ಮೊಬೈಲ್ ಅನ್ನು ಪತ್ತೆ ಮಾಡಬಹುದು. ಆದರೆ, ಇದಕ್ಕೆ ಕೆಲವು ಪ್ರಕ್ರಿಯೆಗಳಿದ್ದು, ಅವುಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಿದೆ. ಮೊಬೈಲ್ ಕಳೆದುಕೊಂಡ ತಕ್ಷಣ ಯಾರೂ ಕೂಡ ಪೊಲೀಸ್ ಠಾಣೆಗೆ ಹೋಗಬೇಕೆಂದಿಲ್ಲ. ಇದ್ದ ಜಾಗದಿಂದಲೇ ಕೆಲವು ಮಾಹಿತಿಯನ್ನು ಆಯಪ್​ನಲ್ಲಿ ಭರ್ತಿ ಮಾಡಿದರೆ ಸಾಕು. ಸುಲಭವಾಗಿ ನಿಮ್ಮ ಮೊಬೈಲ್ ಮತ್ತೆ ನಿಮ್ಮ ಕೈ ಸೇರಬಹುದು" ಎಂದು ತಿಳಿಸಿದರು.

ಮೊಬೈಲ್ ಕಳೆದುಕೊಂಡ ತಕ್ಷಣ ನೀವೇನು ಮಾಡಬೇಕು?: "ಬೇರೆಯವರ ಅಥವಾ ಸಂಬಂಧಿಕರ ಮೊಬೈಲ್ ಮೂಲಕ ಪೊಲೀಸ್ ಇಲಾಖೆಯ 8277969900 ಈ ನಂಬರ್​ಗೆ Hi ಅಂತ ಮೆಸೇಜ್ ಕಳುಹಿಸಬೇಕು. ತಕ್ಷಣವೇ ಮೊಬೈಲ್ ವಾಟ್ಸ್​ಆಯಪ್​​ಗೆ ಒಂದು ಲಿಂಕ್ ಸಂದೇಶ ಬರುತ್ತದೆ. ಆ ಲಿಂಕ್ ಅನ್ನು ಓಪನ್ ಮಾಡಿ ತಮ್ಮ ಕಳೆದುಹೋದ ಮೊಬೈಲ್ ಸಂಖ್ಯೆ ಸೇರಿದಂತೆ ಕೆಲವು ಮಾಹಿತಿಯನ್ನು ಪೂರ್ತಿಯಾಗಿ ಭರ್ತಿ ಮಾಡಬೇಕು. ಆಗ ಭರ್ತಿಯಾದ ಮಾಹಿತಿ ಮೇರೆಗೆ ದೂರು ದಾಖಲಾಗುತ್ತದೆ. ಈ ದೂರು ಪ್ರಕಾರ ಕಳೆದುಹೋದ ಮೊಬೈಲ್ ಅನ್ನು ಕೆಲವು ತಂತ್ರಾಂಶದ ಪ್ರಕ್ರಿಯೆ ಮೂಲಕ ಹುಡುಕಿಕೊಡಲಾಗುವುದು. ಒಂದು ವೇಳೆ ಪತ್ತೆಯಾಗದೇ ಇದ್ದಲ್ಲಿ ಆ ಮೊಬೈಲ್ ಅನ್ನೇ ಬ್ಲಾಕ್ ಮಾಡಲಾಗುತ್ತದೆ. ಇದು ರಾಜ್ಯದಲ್ಲಿಯೇ ಗದಗ ಪೊಲೀಸರಿಂದ ಹೊಸದೊಂದು ಪ್ರಯೋಗವಾಗಿದೆ" ಎಂದು ಹೇಳಿದರು.