ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಸಾಧನೆ ಮರೆಯಲು ಸಾಧ್ಯವಿಲ್ಲ: ಸಚಿವ ಕೆ.ಗೋಪಾಲಯ್ಯ
ಬೆಂಗಳೂರು : ನಾಡಿಗಾಗಿ ದುಡಿದು ಅತ್ಯುತ್ತಮ ಸಾಧನೆಯನ್ನು ಮಾಡಿ ಎಲ್ಲ ರಾಜಕಾರಣಿಗಳಿಗೆ ಸ್ಪೂರ್ತಿಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಾಧನೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ತಿಳಿಸಿದರು.
ಬೆಂಗಳೂರಿನ ಸದಾಶಿವನಗರದಲ್ಲಿನ ಎಸ್.ಎಂ ಕೃಷ್ಣ ಅವರ ಮನೆಗೆ ತೆರಳಿ ಪದವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ನಮ್ಮ ರಾಜ್ಯದ ರಾಜಕಾರಣಿಗಳಿಗೆ ಎಸ್.ಎಂ ಕೃಷ್ಣ ಅವರು ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಕೇಂದ್ರ ಸರ್ಕಾರದ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿಗಳಾದ ಅಮಿತ್ ಶಾ ಅವರು ಈ ಮಹಾನ್ ರಾಜಕಾರಣಿಯನ್ನು ಗುರುತಿಸಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆ ತಂದಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯವರಾಗಿ ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತೆಗೆದುಕೊಂಡಂತಹ ಉತ್ತಮ ನಿರ್ಧಾರಗಳು ಹಾಗೂ ಅವರ ಸೇವೆಗೆ ಈ ಪ್ರಶಸ್ತಿ ಲಭಿಸಿದೆ ಅವರಿಗೆ ಭಗವಂತನು ಹೆಚ್ಚಿನ ಆಯಸ್ಸು, ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವರಾದ ಡಾ.ಕೆ ಸುಧಾಕರ್, ಕಂದಾಯ ಸಚಿವರಾದ ಆರ್.ಅಶೋಕ್ ಹಾಗೂ ಇತರರು ಉಪಸ್ಥಿತರಿದ್ದರು