ಭಾರತದಲ್ಲಿ ಪಾಕ್ ಚಿತ್ರ ಬಿಡುಗಡೆಗೆ ಸಿದ್ಧತೆ; ದೇಶಾದ್ಯಂತ ವ್ಯಾಪಕ ವಿರೋಧ

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹಳಸಿರುವುದು ಗೊತ್ತಿದೆ. ಹೀಗಾಗಿಯೇ ಭಯೋತ್ಪಾದನೆಯ ಮೂಲಕ ಭಾರತವನ್ನು ಮಗ್ಗುಲ ಮುಳ್ಳಾಗಿ ಕಾಡುತ್ತಿರುವ ಪಾಕಿಸ್ತಾನದ ಕಲಾವಿದರು, ಗಾಯಕರಿಗೆ ಈಗ ಮೊದಲಿನಂತೆ ಭಾರತದಲ್ಲಿ ರೆಡ್ ಕಾರ್ಪೆಟ್ ವೆಲ್ಕಮ್ ಕೂಡ ಇಲ್ಲ. ಇದರ ನಡುವೆಯೂ ಪಾಕಿಸ್ತಾನದ ಚಿತ್ರವೊಂದನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸದ್ದಿಲ್ಲದೇ ಸಿದ್ಧತೆಗಳು ನಡೆಯುತ್ತಿದ್ದು, ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಬಿಲಾಲ್ ಲಾಶರಿ ನಿರ್ದೇಶನದ ಚಿತ್ರ 'ದಿ ಲೆಜೆಂಡ್ ಆಫ್ ಮೌಲಾ ಜಟ್'. ಫವಾದ್ ಖಾನ್, ಹುಮೈಮಾ ಮಲ್ಲಿಕ್, ಹಮ್ಜಾ ಅಲಿ ಅಬ್ಬಾಸಿ, ಮಹೀರಾ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಡಿ. 30ರಂದು ಭಾರತದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಇದು ಭಾರತೀಯರನ್ನು ಕೆರಳಿಸಿದ್ದು, ಚಿತ್ರದ ಬಿಡುಗಡೆಗೆ ಅನುಮತಿ ನೀಡಬಾರದೆಂದು ಸಾಮಾಜಿಕ ಜಾಲತಾಣದಲ್ಲಿ ಬ್ಯಾನ್ ಮೌಲಾ ಜಟ್ ಎಂಬ ಹ್ಯಾಶ್ಟ್ಯಾಗ್ ಮೂಲಕ ವಿರೋಧಿಸಲಾಗುತ್ತಿದೆ. ಫವಾದ್ ಖಾನ್, ಮಹೀರಾ ಖಾನ್, ಹುಮೈಮಾ ಮಲ್ಲಿಕ್ ಮೂವರೂ ಈ ಹಿಂದೆ ಕೆಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದರು. ಬಳಿಕ ಪಾಕಿಸ್ತಾನಕ್ಕೆ ತೆರಳಿ ಭಾರತದ ವಿರುದ್ಧ ಮಾತನಾಡಿದ್ದರು.