ಗೆದ್ದವರನ್ನು ನೋಡಿ ಹೊಟ್ಟೆಕಿಚ್ಚು ಪಡಬೇಡಿ ಪೈಪೋಟಿ ನೀಡಿ: ಯಶ್
ರಾಕಿಂಗ್ ಸ್ಟಾರ್ ಯಶ್ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಪ್ರತಿಭೆ ಇಂದು ಚಂದನವನದ ಟಾಪ್ ಸ್ಟಾರ್ ಆಗಿ ನಿಂತಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ಸಹ ಯಶ್ ಖ್ಯಾತಿ ಗಳಿಸಿದ್ದಾರೆ ಹಾಗೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಜಿಎಫ್ ಚಿತ್ರ ಸರಣಿ ಮೂಲಕ ಕನ್ನಡ ಚಿತ್ರರಂಗ ಯಶಸ್ಸಿನ ಉತ್ತುಂಗಕ್ಕೇರಿದ್ದು, ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಾಡಬೇಕೆಂಬ ಹಠ ತೊಟ್ಟಿದ್ದ ಯಶ್ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾರೆ.
ಕೆಜಿಎಫ್ ಚಿತ್ರ ಬರುವುದಕ್ಕೂ ಮುನ್ನ ಕನ್ನಡ ಚಿತ್ರರಂಗದಿಂದ ದೇಶಾದ್ಯಂತ ಸದ್ದು ಮಾಡುವ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಟ್ರೋಲ್ ಮಾಡುತ್ತಿದ್ದವರೆಲ್ಲಾ ಇಂದು ಸ್ಯಾಂಡಲ್‌ವುಡ್ ಇತರೆ ಚಿತ್ರರಂಗಗಳನ್ನು ಮೀರಿಸುವಂತಹ ಚಿತ್ರಗಳನ್ನು ನಿರ್ಮಿಸುತ್ತಿರುವುದನ್ನು ಕಂಡು ಬೆರಗಾಗಿದ್ದಾರೆ ಹಾಗೂ ಈ ಬೃಹತ್ ಬದಲಾವಣೆಯನ್ನು ಶ್ಲಾಘಿಸಿದ್ದಾರೆ.
ಒಟ್ಟಿನಲ್ಲಿ ಕನ್ನಡ ಚಿತ್ರರಂಗ ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದು, ಈ ಯಶಸ್ಸಿಗೆ ಕಾರಣಕರ್ತರಾದ ಹಲವಾರು ಕಲಾವಿದರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಅವರನ್ನು ಹೆಸರಾಂತ ಫಿಲ್ಮ್ ಕಂಪ್ಯಾನಿಯನ್ ಸಂದರ್ಶನ ನಡೆಸಿದೆ. ಹೌದು, ರಾಕಿಂಗ್ ಸ್ಟಾರ್ ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾ ಎಂಬ ಹೆಸರಿನಡಿಯಲ್ಲಿ ಈ ಸಂದರ್ಶನವನ್ನು ನಡೆಸಲಾಗಿದ್ದು ಯಶ್ ಮನಬಿಚ್ಚಿ ಮಾತನಾಡಿದ್ದಾರೆ. ಕೇವಲ ತಮ್ಮ ಚಿತ್ರದ ಕುರಿತು ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಇತರೆ ಚಿತ್ರಗಳು ಹಾಗೂ ಇತರೆ ಚಿತ್ರರಂಗಗಳ ಬಗ್ಗೆಯೂ ಸಹ ಯಶ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದೇ ವೇಳೆ ಬೇರೆ ಚಿತ್ರರಂಗಗಳ ಬಗ್ಗೆ ಹಗುರವಾಗಿ ಮಾತನಾಡುವವರಿಗೂ ಸಹ ಯಶ್ ಸಂದೇಶವನ್ನು ರವಾನಿಸಿದ್ದಾರೆ.