ಬೆಳ್ತಂಗಡಿ ವನ್ಯಜೀವಿ ವಲಯದಲ್ಲಿ ಭಾರೀ ಕಾಡ್ಗಿಚ್ಚು: ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿಗಳಿಂದ ಹರಸಾಹಸ

ಕುದುರೆಮುಖ: ಇಲ್ಲಿದ ರಾಷ್ಟ್ರೀಯ ಉದ್ಯಾನವನದ ಬಳಿಯಲ್ಲಿನ ಬೆಳ್ತಂಗಡಿ ವನ್ಯಜೀವಿ ವಲಯದಲ್ಲಿ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಸುಮಾರು 10 ಎಕರೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸೋದಕ್ಕೆ ಆಗ್ನಿಶಾಮಕ ಸಿಬ್ಬಂದಿ, ಅರಣ್ಯ ಸಿಬ್ಬಂದಿಗಳು ಹರಸಾಹಸ ಪಡುವಂತೆ ಆಗಿದೆ.
ಇತ್ತೀಚಿಗಷ್ಟೇ ಸಕಲೇಶಪುರದಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸೋದಕ್ಕೆ ತೆರಳಿದ್ದಂತ ಓರ್ವ ಅರಣ್ಯ ಸಿಬ್ಬಂದಿ ಬೆಂಕಿ ಅವಘಡದಲ್ಲಿ ಗಾಯಗೊಂಡು ಸಾವನ್ನಪ್ಪಿದ್ದರು. ಮತ್ತೋರ್ವನ ಸ್ಥಿತಿ ಗಂಭೀರಗೊಂಡಿದೆ. ಇದರ ನಡುವೆ ಇತ್ತ ಬೆಳ್ತಂಗಡಿ ಕಾಡಿನಲ್ಲಿಯೂ ಬೆಂಕಿ ಕಾಣಿಸಿಕೊಂಡು, ನಂದಿಸೋ ಕಾರ್ಯ ನಡೆಯುತ್ತಿದೆ.
ಸುಮಾರು 10 ಎಕರೆ ಅರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದಂತ ಬೆಂಕಿಯನ್ನು ನಂದಿಸೋ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಸಿಬ್ಬಂದಿಗಳು ತೊಡಗಿದ್ದಾರೆ. ಶೇ.80ರಷ್ಟು ಹೆಚ್ಚಿನ ಬೆಂಕಿಯನ್ನು ನಂದಿಸಲಾಗಿದೆ ಎನ್ನಲಾಗುತ್ತಿದೆ. ಇನ್ನುಳಿದ ಬೆಂಕಿ ನಂದಿಸೋ ಕಾರ್ಯ ಮುಂದುವರೆದಿದೆ ಎಂದು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸ್ವಾತಿ ಎಲ್ ತಿಳಿಸಿದ್ದಾರೆ.
ಕಾಡ್ಗಿಚ್ಚು ನಂದಿಸೋದಕ್ಕೆ 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ತೊಡಗಿದ್ದಾರೆ. ದುರ್ಗಮ ಪ್ರದೇಶವಾದ್ದರಿಂದ ನಡೆದೇ ಸಾಗಬೇಕು. ನೆಟ್ವರ್ಕ್ ಇಲ್ಲದ ಕಾರಣ, ಅರಣ್ಯ ಸಿಬ್ಬಂದಿಗಳನ್ನು ಸಂಪರ್ಕಿಸೋದಕ್ಕೂ ಕಷ್ಟವಾಗುತ್ತಿದೆ. ಈ ನಡುವೆಯೂ ನಮ್ಮ ಸಿಬ್ಬಂದಿಗಳು ಕಾಡಿಗೆ ಬಿದ್ದಿರುವಂತ ಬೆಂಕಿಯನ್ನು ನಂದಿಸೋ ಕೆಲಸದಲ್ಲಿ ನಿರತರಾಗಿರೋದಾಗಿ ಹೇಳಿದ್ದಾರೆ.