ರಾಜ್ಯದಲ್ಲಿ ಇಂದು ಅಮಿತ್ ಶಾ ಹವಾ: ಬಳ್ಳಾರಿಯ ಸಂಡೂರಿನಲ್ಲಿ Rally, ಬೆಂಗಳೂರಿನಲ್ಲಿ ಸಂವಾದ, ಪಕ್ಷದ ಸಂಘಟನೆ ಸಭೆ

ಬೆಂಗಳೂರು: ಮುಂಬರುವ ರಾಜ್ಯ ಚುನಾವಣೆ ಹೊತ್ತಿನಲ್ಲಿ ಕೇಂದ್ರದ ನಾಯಕರು ಕರ್ನಾಟಕ ಭೇಟಿ ಮುಂದುವರೆದಿದೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು, ಎಲ್ಲೆಲ್ಲೂ ಅವರದ್ದೇ ಹವಾ ಇರಲಿದೆ. ಬಳ್ಳಾರಿಯ ಸಂಡೂರಿನಲ್ಲಿ ರ್ಯಾಲಿ ನಡೆಸಲಿರುವಂತ ಅವರು, ಆ ಬಳಿಕ ಬೆಂಗಳೂರಿಗೆ ಆಗಮಿಸಿ ಸಂವಾದ, ಪಕ್ಷ ಸಂಘಟನೆಗಾಗಿ ಸಭೆ ನಡೆಸಲಿದ್ದಾರೆ.
ದೆಹಲಿಯಿಂದ ಹುಬ್ಬಳ್ಳಿಗೆ ವಿಶೇಷ ವಿಮಾನದಲ್ಲಿ ಆಗಮಿಸಲಿರುವಂತ ಅಮಿತ್ ಶಾ, ಹೆಲಿಕಾಪ್ಟರ್ ಮೂಲಕ ಸಂಡೂರಿಗೆ ತೆರಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಇಲ್ಲಿನ ಹೊಸಪೇಟೆ ರಸ್ತೆಯ ಎಸ್ ಆರ್ ಎಸ್ ಮೈದಾನದಲ್ಲಿ ಆಯೋಜಿಸಿರುವಂತ ಬಹಿರಂಗ ಸಭೆಯಲ್ಲಿ ಭಾಗವಹಿಸಿ, ಮಾತನಾಡಲಿದ್ದಾರೆ.
ಬಳ್ಳಾರಿಯ ಸಂಡೂರಿನಲ್ಲಿ ನಡೆಯುತ್ತಿರುವಂತ ಸಮಾವೇಶಕ್ಕೆ ಕಲ್ಯಾಣ ಕರ್ನಾಟಕ ಭಾಗದ ಲಕ್ಷಾಂತರ ಜನರು ಭಾಗವಹಿಸೋ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಕೂಡ ಪಾಲ್ಗೊಳ್ಳಲಿದ್ದಾರೆ.
ಬಳ್ಳಾರಿಯ ಸಮಾವೇಶದ ಬಳಿಕ, ಅಲ್ಲಿಂದ ಸಂಜೆ ಬೆಂಗಳೂರಿಗೆ ಮರಳಿ, ವಿವಿಧ ಕ್ಷೇತ್ರಗಳ ಆಯ್ದ ಪ್ರಮುಖರೊಂದಿಗೆ ಸಂವಾದ ನಡೆಸಲಿದ್ದಾರೆ.
ಇನ್ನೂ ಸಂವಾದದ ಬಳಿಕ ರಾತ್ರಿ ಬೆಂಗಳೂರಿನಲ್ಲಿ ಪಕ್ಷ ಸಂಘಟನೆಯ ಕುರಿತು ಪ್ರಮುಖ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ನಾಳೆ ಬೆಳಿಗ್ಗೆ ನವದೆಹಲಿಗೆ ವಾಪಾಸು ಆಗಲಿದ್ದಾರೆ.