ಬೆಳ್ತಂಗಡಿ: ಕಾಂಗ್ರೆಸ್‌ನಿಂದ ರಕ್ಷಿತ್‌, ಬಿಜೆಪಿಯಲ್ಲಿ ಹರೀಶ್‌ ಪೂಂಜ ಸ್ಪರ್ಧೆ ಸಾಧ್ಯತೆ

ಬೆಳ್ತಂಗಡಿ: ಕಾಂಗ್ರೆಸ್‌ನಿಂದ ರಕ್ಷಿತ್‌, ಬಿಜೆಪಿಯಲ್ಲಿ ಹರೀಶ್‌ ಪೂಂಜ ಸ್ಪರ್ಧೆ ಸಾಧ್ಯತೆ

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ನೇತ್ರಾವತಿ, ಫಲ್ಗುಣಿ, ಮೃತ್ಯುಂಜಯ, ಸೋಮಾವತಿ ನದಿಗಳಲ್ಲಿ ನೀರು ಹರಿದ ಹಾಗೇ ರಾಜಕೀಯ ಬೆಳವಣಿಗೆಗಳು ನಡೆದಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಸ್ಥಾನ ಭದ್ರಗೊಳಿಸಬೇಕು ಎಂಬ ಹವಣಿಕೆಯಲ್ಲಿದೆ.

ಅಂತೆಯೇ ಕಾಂಗ್ರೆಸ್‌ ಕಳೆದು ಹೋದ ಸ್ಥಾನ ಮಾನವನ್ನು ಹೇಗೆ ದಕ್ಕಿಸಿಕೊಳ್ಳಬಹುದು ಎಂಬ ಚಿಂತನೆಯಲ್ಲಿದೆ. ಬಿಜೆಪಿ ಶಾಸಕರ ಹರೀಶ ಪೂಂಜ ಅಭ್ಯರ್ಥಿ ಎಂಬ ಭಾವನೆ ಎಲ್ಲೆಡೆ ಇದೆ. ಸುಮಾರು ೧,೮೦೦ ಕೋಟಿ ರೂ.ಗಳಷ್ಟು ಅನುದಾನದ ವಿವಿಧ ಕಾರ್ಯಕ್ರಮಗಳಿಗೆ ವಿನಿಯೋಗಿಸಿರುವುದು ಸ್ಥಾನ ಭದ್ರವಾಗಲು ಕಾರಣವಾಗಿದೆ.

ರಕ್ಷಿತ್‌ ಶಿವರಾಂ ಅಭ್ಯರ್ಥಿಯಾಗುವರೇ?:

ಇತ್ತ ಕಾಂಗ್ರೆಸ್‌ ಸಂಘಟನೆ ತಾಲೂಕಿನಲ್ಲಿ ಹಿಂದಿನಷ್ಟು ಪ್ರಬಲವಾಗಿಲ್ಲ. ಪಕ್ಷ ಸಂಘಟನೆಗೆ ಒತ್ತು ನೀಡಿದ್ದು ಕಡಿಮೆ. ಅಲ್ಲದೆ ಕಾಂಗ್ರೆಸ್‌ನ ಅರ್ಧಕ್ಕೂ ಹೆಚ್ಚು ಕಾರ್ಯಕರ್ತರನ್ನು, ಮತದಾರರನ್ನು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಹೀಗಾಗಿ ೪೮ ಗ್ರಾಮ ಪಂಚಾಯತ್‌ಗಳಲ್ಲಿ ೪೧ ರಷ್ಟು ಗ್ರಾಮ ಪಂಚಾಯತಿಗಳ ಆಡಳಿತ ಬಿಜೆಪಿ ಬೆಂಬಲಿಗರ ಕೈಯಲ್ಲಿದೆ. ಕಾಂಗ್ರೆಸ್‌ ಪಕ್ಷದ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಯಾಗಬಯಸುವವರು ಮೊದಲಾಗಿ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ಮಾಡಿರುವುದರಿಂದ ಇಲ್ಲಿ ಈ ಬಾರಿ ಮೂವರು ಅರ್ಜಿ ಹಾಕಿದ್ದಾರೆ. ಮಾಜಿ ಶಾಸಕ ವಸಂತ ಬಂಗೇರ, ಗಂಗಾಧರ ಗೌಡ ಹಾಗೂ ಹೊಸ ಮುಖವಾದ ರಕ್ಷಿತ್‌ ಶಿವರಾಂ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ರಾಜ್ಯ ಮುಖ್ಯಸ್ಥರು ಯಾರಿಗೆ ಟಿಕೇಟ್‌ ಕೊಡಲಿದ್ದಾರೆ ಎಂಬ ಕುತೂಹಲದ ನಡುವೆಯೂ ಮುಖ್ಯಸ್ಥರು ಹೊಸ, ಯುವ ಮುಖಕ್ಕೇ ಅವಕಾಶ ನೀಡಲಿದೆ ಎಂಬ ಪ್ರಚಾರವೂ ಇದೆ. ರಕ್ಷಿತ್‌ ಶಿವರಾಂ ಅವರು ಮಾಜಿ ಹಿರಿಯ ಪೊಲೀಸ್‌ ಅಧಿಕಾರಿ ಬಿ.ಕೆ.ಶಿವರಾಂ ಅವರ ಪುತ್ರ. ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್‌ ಅವರ ಹತ್ತಿರದ ಸಂಬಂಧಿ. ಸದ್ಯ ರಕ್ಷಿತ್‌ ಶಿವರಾಂ ಬೆಸ್ಟ್‌ ಫೌಂಡೇಶನ್‌ ಎಂಬ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷರಾಗಿ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ.

ಬಂಟ, ಬಿಲ್ಲವ ಲೆಕ್ಕಾಚಾರ: ಪ್ರಸ್ತುತ ಶಾಸಕರಾಗಿರುವ ಹರೀಶ್‌ ಪೂಂಜ ಅವರ ಕಾರ್ಯವೈಖರಿಯಿಂದಾಗಿ ಯುವ ಜನತೆ ಹೆಚ್ಚು ಆಕರ್ಷಣೆಗೊಳಗಾಗಿದೆ. ಅಭಿವೃದ್ಧಿಯ ಕಾರ್ಯಗಳೂ ವೇಗದಿಂದ ನಡೆದಿವೆ. ಹಿಂದಿನ ಚುನಾವಣೆಗಿಂತ ಹೆಚ್ಚಿನ ಮತಗಳನ್ನು ಪಡೆಯಬೇಕು ಎಂಬ ಛಲವನ್ನು ಪಕ್ಷ ಹೊಂದಿದೆ. ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಬಿಲ್ಲವ ಸಮುದಾಯದೊಳಗಿನ ಇತ್ತೀಚಿನ ಕೆಲ ಬೆಳವಣಿಗೆಗಳಿಂದ ಮತ್ತು ಬಂಟ ಸಮುದಾಯದವರ ಇತ್ತೀಚಿನ ಕೆಲ ಹೇಳಿಕೆಗಳಿಂದ ಬಿಜೆಪಿಯ ಮತಗಳಿಕೆ ಹೆಚ್ಚಾಗುತ್ತದೋ ಕಡಿಮೆಯಾಗುತ್ತದೋ ಎಂದು ಕಾದು ನೋಡಬೇಕಾಗಿದೆ. ಅಲ್ಲದೆ ರಾಜ್ಯದಲ್ಲಿನ ಇತ್ತೀಚಿನ ಚುನಾವಣೆಗಳಲ್ಲಿ ಕಾಂಚಾಣದ ಪಾತ್ರ ಹೆಚ್ಚುತ್ತಿದ್ದು. ಅದು ಈ ಬಾರಿ ಬೆಳ್ತಂಗಡಿಯಲ್ಲೂ ಕಾಣಿಸುವ ಸಾಧ್ಯತೆ ಇದೆ. ಮುಂದಿನ ಅಸೆಂಬ್ಲಿ ಚುನಾವಣೆ ಬಳ್ಳಾರಿ, ಬೆಂಗಳೂರು ಶೈಲಿಯಲ್ಲಿ ನಡೆಯುವ ಆತಂಕ ಪ್ರಜ್ಞಾವಂತರಲ್ಲಿ ಕಾಣಿಸುತ್ತಿದೆ.

ಕ್ಷೇತ್ರದ ಭೌಗೋಳಿಕ ಪರಿಚಯ: ೮೧ ಗ್ರಾಮಗಳಿರುವ ಬೆಳ್ತಂಗಡಿಯು ತಾಲೂಕು ಹೌದು. ವಿಧಾನಸಭಾಕ್ಷೇತ್ರವೂ ಆಗಿದೆ. ಬೆಳ್ತಂಗಡಿ ವಿಧಾನ ಸಭಾಕ್ಷೇತ್ರವು ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಮಂಡಂತ್ಯಾರು, ವೇಣೂರು ಎಂಬ ಮುಖ್ಯ ಪೇಟೆಗಳನ್ನು ಹೊಂದಿದೆ. ತಾಲೂಕಿನಲ್ಲಿರುವ ಧರ್ಮಸ್ಥಳ ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರ. ಧರ್ಮಸ್ಥಳ ಹಾಗೂ ವೇಣೂರಿನಲ್ಲಿ ಎರಡು ಬಾಹುಬಲಿ ಮೂರ್ತಿಯನ್ನು ಹೊಂದಿರುವ ತಾಲೂಕು ಇದಾಗಿದೆ. ಪೌರಾಣಿಕವಾಗಿ, ಐತಿಹಾಸಿಕವಾಗಿ, ಸಾಮಾಜಿಕವಾಗಿ ವಿಶೇಷತೆಗಳನ್ನು ಹೊಂದಿರುವ ಈ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಸ್ತುತ ಓರ್ವ ಲೋಕಸಭಾ, ಓರ್ವ ರಾಜ್ಯ ಸಭಾ, ಓರ್ವ ವಿಧಾನ ಸಭಾ ಹಾಗೂ ಇಬ್ಬರು ವಿಧಾನಪರಿಷತ್‌ ಸದಸ್ಯರನ್ನು ಹೊಂದಿದೆ. ಇವರಲ್ಲಿ ನಾಲ್ಕು ಮಂದಿ ಬೆಳ್ತಂಗಡಿಯವರೇ ಆಗಿದ್ದಾರೆ.

ಸುಮಾರು ೨,೧೮,೯೩೫ ಮತದಾರರು ಬೆಳ್ತಂಗಡಿ ವಿಧಾನಸಭಾಕ್ಷೇತ್ರದಲ್ಲಿ ಶೇ. ೭೩ ಹಿಂದುಗಳು, ಶೇ. ೧೨ ಮುಸ್ಲಿಂ ಮತ್ತು ಶೇ ೧೧ ಕ್ರಿಶ್ಚಿಯನ್‌ ಧರ್ಮದವರಿದ್ದಾರೆ. ಇವರ ಪೈಕಿ ಬಿಲ್ಲವ ಸಮುದಾಯದವರು ದೊಡ್ಡ ಸಂಖ್ಯೆ ಇದ್ದರೆ ಇದ್ದರೆ ಬಳಿಕ ಕ್ರಮವಾಗಿ ಪ.ಜಾ.,ಪ.ಪಂ. ಒಕ್ಕಲಿಗ, ಬಂಟ, ಜೈನ, ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಬ್ರಾಹ್ಮಣ ಸಮುದಾಯದವರು ಇದ್ದಾರೆ. ೧೯೫೭ ರಿಂದ ಇಲ್ಲಿ ಅಸೆಂಬ್ಲಿ ಚುನಾವಣೆ ನಡೆದಿದೆ. ೧೯೫೭ ರಲ್ಲಿ ಕಾಂಗ್ರೆಸ್‌ನಿಂದ ರತ್ನವರ್ಮ ಹೆಗ್ಗಡೆ, ೧೯೬೨ ಮತ್ತು ೧೯೬೭ ರಲ್ಲಿ ವೈಕುಂಠ ಬಾಳಿಗ, ೧೯೭೨ ರಲ್ಲಿ ಸುಬ್ರಹ್ಮಣ್ಯ ಗೌಡ, ೧೯೭೮ ರಲ್ಲಿ ಗಂಗಾಧರ ಗೌಡ ಆಯ್ಕೆಯಾಗಿದ್ದರೆ, ೧೯೮೩ ಮತ್ತು ೧೯೮೫ರಲ್ಲಿ ಬಿಜೆಪಿಯಿಂದ ವಸಂತ ಬಂಗೇರ, ೧೯೮೯ ರಲ್ಲಿ ಕಾಂಗ್ರೆಸ್‌ನಿಂದ ಗಂಗಾಧರ ಗೌಡ, ೧೯೯೪ರಲ್ಲಿ ಜನತಾದಳದಿಂದ ವಸಂತ ಬಂಗೇರ, ೧೯೯೯ ಮತ್ತು ೨೦೦೪ ರಲ್ಲಿ ಬಿಜೆಪಿಯಿಂದ ಪ್ರಭಾಕರ ಬಂಗೇರ, ೨೦೦೮ ಮತ್ತು ೨೦೧೩ರಲ್ಲಿ ಕಾಂಗ್ರೆಸ್‌ನಿಂದ ವಸಂತ ಬಂಗೇರ, ೨೦೧೮ ರಲ್ಲಿ ಬಿಜೆಪಿಯಿಂದ ಹರೀಶ ಪೂಂಜ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವಸಂತ ಬಂಗೇರ ಹಾಗೂ ಪ್ರಭಾಕರ ಬಂಗೇರ ಸಹೋದರರಾಗಿದ್ದು ಇಬ್ಬರೂ ಬೇರೆ ಬೇರೆ ಪಕ್ಷದಿಂದ ಸ್ಪರ್ಧಿಸಿ ಗೆದ್ದಿರುವುದು ಈ ಕ್ಷೇತ್ರದ ವಿಶೇಷ