ಬೆಂಗಳೂರಿನಲ್ಲಿ ಮತ್ತೆ ಮಂಗಳಮುಖಿಯರ ಪುಂಡಾಟ; ವಿಡಿಯೋ ವೈರಲ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಕೆಲವು ಮಂಗಳಮುಖಿಯರ ಆಟಾಟೋಪ ಜಾಸ್ತಿಯಾಗಿದೆ. ಅವು ಬಂದು ಕೇಳಿದಾಗ ಕೇಳಿದಷ್ಟು ದುಡ್ಡು ಕೊಟ್ರೆ ಓಕೆ, ಇಲ್ಲದಿದ್ರೆ ಜೋಕೆ ಎನ್ನುವಂತಿದೆ ಪರಿಸ್ಥಿತಿ.
ಸಾಮಾನ್ಯವಾಗಿ ಈ ಮಂಗಳಮುಖಿಯರು ಒಬ್ಬೊಬ್ಬರೇ ಬರುವುದಿಲ್ಲ.
ನಗರದಲ್ಲಿ ಕೆಲವು ಮಂಗಳಮುಖಿಯರ ದೌರ್ಜನ್ಯ ಪದೇ ಪದೇ ರಿಪೀಟ್ ಆಗುತ್ತಿದೆ. ಪೊಲೀಸರು ಸೂಚನೆ ಕೊಟ್ಟರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇಂಥವರಿಂದ ತಮ್ಮ ಪಾಡಿಗೆ ತಾವು ಬದುಕುತ್ತಿರುವ, ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಕೆಲವು ಒಳ್ಳೆಯ ಮಂಗಳಮುಖಿಯರಿಗೂ ತೊಂದರೆಯಾಗುತ್ತಿದೆ.
ಇದೀಗ ಕನಕಪುರ ರಸ್ತೆಯ ಗುಬ್ಬಲಾಳದಲ್ಲಿ ಐದಾರು ಮಂದಿ ಮಂಗಳಮುಖಿಯರು ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಿ ದಾಂಧಲೆ ಮಾಡಿರುವ ಘಟನೆ ಶನಿವಾರ ನಡೆದಿದೆ. ಕಾರ‌್ಯಕ್ರಮದ ಮಧ್ಯದಲ್ಲಿ ಪೂಜೆ ನಡೆಯುವಾಗಲೇ ಮನೆಗೆ ನುಗ್ಗಿ ಹಣ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬಟ್ಟೆ ಎತ್ತಿ ಎಲ್ಲರೆದುರಲ್ಲೇ ಅಸಭ್ಯ ವರ್ತನೆ ಮಾಡಿದ್ದಾರೆ. ಮಂಗಳಮುಖಿಯರ ಈ ವರ್ತನೆಯನ್ನು ಅಲ್ಲೇ ಇದ್ದ ಕುಟುಂಬ ಸದಸ್ಯರೊಬ್ಬರು ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಪೊಲೀಸರನ್ನು ಕರೆಸುತ್ತೇವೆ ಎಂದು ಮನೆಯವರು ಹೇಳಿದಾಗ, ''ಯಾರೇ ಬಂದ್ರೂ ಏನೂ ಮಾಡೋಕೆ ಆಗಲ್ಲ'' ಎಂದು ಮಂಗಳಮುಖಿಯರು ಪುಂಡಾಟ ಮಾಡಿದ್ದಾರೆ. ನಂತರ ಬೇರೆ ದಾರಿ ಕಾಣದೇ ಮನೆ ಮಾಲೀಕರು ಅವರು ಕೇಳಿದಷ್ಟು ಹಣ ಕೊಟ್ಟಿದ್ದಾರೆ. ಆನಂತರ ಅವರೆಲ್ಲ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಹಿಂದೆ ಕೂಡ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗೃಹ ಪ್ರವೇಶ ಕಾರ‌್ಯಕ್ರಮದಲ್ಲಿ ಕೆಲವು ಮಂಗಳಮುಖಿಯರು ಹೀಗೆಯೇ ದಾಂಧಲೆ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಅವರನ್ನು ಬಂಧಿಸಿದ್ದರು.