ಪ್ರೀತಿಸಿ ಮದುವೆ ಆಗದೆ ಇರುವುದು ವಂಚನೆಯಲ್ಲ : ಹೈಕೋರ್ಟ್ ಏಕಸದಸ್ಯ ಪೀಠದ ಮಹತ್ವದ ತೀರ್ಪು

ಬೆಂಗಳೂರು : ಹುಡುಗ ಹುಡಿಗಿ ಪ್ರೀತಿ ಮಾಡ್ತಾ ಇದ್ದಾರೆ ಅಂದ್ರೆ ಅವರು ಮದುವೆ ಆಗಲೇಬೇಕು. ಇಲ್ಲ ಅಂದ್ರೆ ಅದು ಮಹಾವಂಚನೆ ಅನ್ನೋ ಭಾವನೆ ನಮ್ಮ ಸಮಾಜದಲ್ಲಿ ಇಂದಿಗೂ ಇದೆ. ಆದ್ರೆ ಇದೀಗ ಹೈಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದ್ದು, ಪ್ರೀತಿಸಿ ಮದುವೆ ಆಗದೇ ಇರೋದು ವಂಚನೆಯಲ್ಲ ಎಂದು ಹೇಳಿದೆ.
ಮೋಸದ ಉದ್ದೇಶದಿಂದಲೇ ಒಪ್ಪಂದ ಮಾಡಿ ಉಲ್ಲಂಘಿಸಿದರೆ ಮಾತ್ರ ಅದನ್ನ ವಂಚನೆ ಅಪರಾಧದಡಿ ಶಿಕ್ಷಿಸಲು ಸಾಧ್ಯ. ಆದ್ರೆ ಇಲ್ಲಿ ಮೋಸ ಮಾಡುವ ಉದ್ದೇಶ ಕಂಡು ಬಂದಿಲ್ಲ ಎಂಬ ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. 2020ರ ಮೇ5 ರಂದು ಬೆಂಗಳೂರಿನ ರಾಮಮೂರ್ತಿನಗರ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದು ಮಾಡುವಂತೆ ವೆಂಕಟೇಶ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಯುವತಿಯೊಬ್ಬಳು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿ ವೆಂಕಟೇಶ್ ತನ್ನನ್ನು 8 ವರ್ಷದಿಂದ ಪ್ರೀತಿಸುತ್ತಿದ್ದ. ಎಲ್ಲಡೆ ಸುತ್ತಾಡಿದ್ದು, ಮದುವೆಯಾಗುವ ಭರವಸೆಯನ್ನೂ ನೀಡಿದ್ದ. ಅಷ್ಟೇ ಅಲ್ಲದೆ, ಆತನ ಮನೆಗೂ ಕರೆದುಕೊಂಡು ಹೋಗಿ ಮದುವೆ ಭರವಸೆ ನೀಡಿದ್ದ. ಇಷ್ಟೆಲ್ಲ ಆದ ಮೇಲೂ ಬೇರೆ ಯುವತಿ ಜೊತೆ ವೆಂಕಟೇಶ್ ಮದುವೆಯಾಗಿದ್ದಾನೆ.
ವೆಂಕಟೇಶ್ ನನಗೆ ಮೋಸ ಮಾಡಿದ್ದಲ್ಲದೆ, ಇಡೀ ಕುಟುಂಬ ನನಗೆ ಮೋಸ ಮಾಡಿದೆ ಎಂದು ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಳು. ಯುವತಿ ಕೊಟ್ಟ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ರಾಮಮೂರ್ತಿ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದರು. ಯುವತಿಗೆ ಯಾವುದೇ ಮೋಸ ಮಾಡಿಲ್ಲ. ಯುವತಿ ನೀಡಿದ ದೂರು ಕಾನೂನು ಬಾಹಿರವಾಗಿದ್ದು ಪ್ರಕರಣ ರದ್ದು ಮಾಡುವಂತೆ ವೆಂಕಟೇಶ್ ಹೈಕೋರ್ಟ್ ಮೆಟ್ಟಿಲೇರಿದ್ದ. ಸದ್ಯ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ. ನಟರಾಜನ್ ಅವರು ಪ್ರೀತಿಸಿ ಮದುವೆ ಆಗದೇ ಇರೋದು ವಂಚನೆ ಆಗಲ್ಲ ಎಂದು ತೀರ್ಪು ನೀಡಿದ್ದಾರೆ.