ಬಿ.ಇಡಿ ಸೀಟ್ಗೆ ಹೊಸ ಮೀಸಲು: 394 ಕಾಲೇಜುಗಳಿಂದ 17,475 ಸೀಟು ಲಭ್ಯ, 13ರಿಂದ 20ರವರೆಗೆ ಕೌನ್ಸೆಲಿಂಗ್

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ (2022&23) ಬಿ.ಇಡಿ ಕೋರ್ಸ್ಗೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಲಭ್ಯವಾಗುವ ಸರ್ಕಾರಿ ಸೀಟು ಭರ್ತಿ ಮಾಡುವ ಸಂಬಂಧ ಮೆರಿಟ್, ಹೊಸ ಮೀಸಲಾತಿ ಅನ್ವಯ ಸೀಟು ಹಂಚಿಕೆ ಆಯ್ಕೆ ಪಟ್ಟಿ ಮತ್ತು ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಪ್ರಸಕ್ತ ಸಾಲಿನಲ್ಲಿ ನ.1ರಿಂದಲೇ ಅನ್ವಯವಾಗುವಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿಗೆ ಶೇ.17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.7ರಂತೆ ಮೀಸಲಾತಿ ಪ್ರಮಾಣ ಅನುಷ್ಠಾನಗೊಳಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿಳಿಸಿದೆ.
9 ಸರ್ಕಾರಿ ಕಾಳೇಜುಗಳಲ್ಲಿ 850, 50 ಅನುದಾನಿತ ಕಾಲೇಜುಗಳಲ್ಲಿ 2,688 ಮತ್ತು 335 ಖಾಸಗಿ ಕಾಲೇಜುಗಳಲ್ಲಿ 13,937 ಸೀಟು ಸೇರಿ ಒಟ್ಟಾರೆ 17,475 ಸೀಟುಗಳು ಲಭ್ಯವಾಗಲಿವೆ. ಈ ಬಾರಿ ಒಟ್ಟಾರೆ 56,548 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 1,482 ಅರ್ಜಿ ತಿರಸ್ಕರಿಸಿದ್ದು, 37,591 ಅರ್ಹತೆಗೊಳಿಸಿದ್ದು, ಅಂತಿಮವಾಗಿ 17,475 ಅಭ್ಯರ್ಥಿಗಳನ್ನು ಆಯ್ಕೆಪಟ್ಟಿಗೆ ಪರಿಗಣಿಸಲಾಗಿದೆ. ಮಾಹಿತಿಯನ್ನು ಶಾಲಾ ಶಿಕ್ಷಣ ವೆಬ್ಸೈಟ್ https://schooleducation.kar.nic.inಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ಈ ಸಂಬಂಧ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ತಿಳಿಸಿದೆ.
ಕಾಲೇಜು ಬದಲಾವಣೆ ಅಭ್ಯರ್ಥಿಗಳಿಗೆ ಸೂಚನೆ: ಅಭ್ಯರ್ಥಿಯು ಸೀಟು ಹಂಚಿಕೆಯಾದ ಕಾಲೇಜಿಗೆ ದಾಖಲಾತಿ ಪಡೆಯಲು ಇಚ್ಛಿಸಿ ಮೂಲದಾಖಲೆಗಳ ಪರಿಶೀಲನೆಗೆ ಹಾಜರಾಗಿ, ಪರಿಶೀಲನೆ ನಂತರ ದಾಖಲಾತಿ ಶುಲ್ಕ ಪಾವತಿಸಿದರೆ, ಸಂಬಂಧಪಟ್ಟ ಕಾಲೇಜಿಗೆ ಸೀಟು ಹಂಚಿಕೆಯಾಗುತ್ತದೆ. ಕಾಲೇಜು ಬದಲಾವಣೆ ಅಥವಾ ಮುಂದಿನ ಸುತ್ತಿನಲ್ಲಿ ಸೀಟು ಪಡೆಯಲು ಪರಿಗಣಿಸುವುದಿಲ್ಲ. ಆದ್ದರಿಂದ ಶುಲ್ಕ ಪಾವತಿಸುವ ಚಲನ್ ಅನ್ನು ಜನರೇಟ್ ಮಾಡುವ ಮೊದಲೇ ಕಾಲೇಜಿನ ಆಯ್ಕೆಯನ್ನು ಖಾತ್ರಿ ಮಾಡಿಕೊಳ್ಳುವಂತೆ ಸೂಚಿಸಿದೆ. ನಿಗದಿತ ದಿನಾಂಕದೊಳಗೆ ಕಾಲೇಜಿಗೆ ದಾಖಲಾಗದಿದ್ದರೆ, ಸೀಟು ತಂತಾನೆ ರದ್ದಾಗಲಿದೆ.
ಪ್ರವೇಶಾತಿ ವೇಳಾಪಟ್ಟಿ
* ಜ.11 ಆಯ್ಕೆಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕೊನೇ ದಿನ. ಜ.13 ಎಸ್ಬಿಐ ಬ್ಯಾಂಕ್ನಲ್ಲಿ ಶುಲ್ಕ ಪಾವತಿಸುವುದು, ಬಳಿಕ ಜಿಲ್ಲಾ ಕೇಂದ್ರದಿಂದ ದಾಖಲಾತಿ ಪ್ರವೇಶ ಪಡೆದು ಮೂಲ ದಾಖಲೆಗಳೊಂದಿಗೆ ಕಾಲೇಜು ಪ್ರವೇಶ ಪಡೆಯುವುದು
* ಜ.13 ಮೊದಲ ಸುತ್ತಿನ ಸೀಟು ಹಂಚಿಕೆ ನಂತರ ಉಳಿದ ಸೀಟುಗಳ ಪ್ರಕಟ
* ಜ.14,15 ಮೊದಲ ಸುತ್ತಿನಲ್ಲಿ ಹಂಚಿಕೆಯಾದ ಕಾಲೇಜಿಗೆ ದಾಖಲಾಗದೆ, ಮರು ಹಂಚಿಕೆ ಬಯಸುವವವರು ಆಯ್ಕೆಯನ್ನು ದಾಖಲಿಸಲು ಅವಕಾಶ
* ಜ.17 ಅಭ್ಯರ್ಥಿಗಳು ಹೊಸದಾಗಿ ನೀಡಿರುವ ಆದ್ಯತೆಯನ್ನು ಪರಿಗಣಿಸಿ 2ನೇ ಸುತ್ತಿನ ಸೀಟು ಹಂಚಿಕೆ. ಜ.18&20 ದಾಖಲಾತಿ ಪರಿಶೀಲನೆ, ಶುಲ್ಕ ಪಾವತಿ ಮತ್ತು ಕಾಲೇಜು ಪ್ರವೇಶ
ಆಕ್ಷೇಪಣೆಗೆ ಕೊನೇ ದಿನ ಜ.11
ಪ್ರಸ್ತುತ ಸಾಲಿನಿಂದ ಸೀಟು ಹಂಚಿಕೆ ಕೌನ್ಸೆಲಿಂಗ್ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ನಡೆಯಲಿದೆ. ಆಲೈನ್ನಲ್ಲಿ ಅವಕಾಶವಿರುವುದಿಲ್ಲ. ಜ.6ರಂದು ಪ್ರಕಟಿಸಿರುವ ಆಯ್ಕೆಪಟ್ಟಿಗೆ ಅನುಗುಣವಾಗಿ ಸ್ನಾತಕ/ ಸ್ನಾತಕೋತ್ತರ ಅಂಕಗಳ ತಿದ್ದುಪಡಿ, ಮಿಸಲಾತಿ ಕುರಿತ ಆಕ್ಷೇಪಣೆಗಳಿದ್ದಲ್ಲಿ ಅಭ್ಯರ್ಥಿಗಳು ಜ.11ರೊಳಗೆ ಜಿಲ್ಲಾ ಡಯಟ್ ಕೇಂದ್ರಗಳಲ್ಲಿ ಸಲ್ಲಿಸಬಹುದು.
10ಕ್ಕೆ ಹೆಚ್ಚುವರಿ ಶಿಕ್ಷಕರ ಅಂತಿಮ ಪಟ್ಟಿ ಪ್ರಕಟ
ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಶುಕ್ರವಾರ ಬಿಡುಗಡೆಯಾಗಬೇಕಿದ್ದ ಹೆಚ್ಚುವರಿ ಶಿಕ್ಷಕರ ಅಂತಿಮ ಕರಡು ಪಟ್ಟಿಯನ್ನು ಜ.10ರಂದು ಪ್ರಕಟಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ. ತಾಂತ್ರಿಕ ಕಾರಣಗಳಿಂದ ಪಟ್ಟಿಯನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಡಿ.12ರಂದೇ ಹೆಚ್ಚುವರಿ ಶಿಕ್ಷಕರ ಕರಡು ಪಟ್ಟಿ ಪ್ರಕಟಿಸಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ ಅವಕಾಶ ನೀಡಿದೆ. ಇದೀಗ ವಿಭಾಗೀಯ ಸಹ ನಿರ್ದೇಶಕರು ಹಾಗೂ ಅಹವಾಲು ಸ್ವೀಕಾರ ಪ್ರಾಧಿಕಾರಗಳು ಅಹವಾಲು ಪರಿಶೀಲಿಸಿ ಅಂತಿಮ ಪಟ್ಟಿ ಪ್ರಕಟಿಸಬೇಕಿದೆ.
ಕಾರಣಗಳೇನು?: ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ವರ್ಗಾವಣೆ ಬಯಸಿರುವ ಶಿಕ್ಷಕರ ದಾಖಲೆ ಮತ್ತು ಅರ್ಹತೆಯನ್ನು ಪರಿಶೀಲಿಸಿ ಮಾಹಿತಿಯನ್ನು ಅಪ್ಲೋಡ್ ಮಾಡುವ ಕಾರ್ಯ ವಿಳಂಬವಾಗಿದೆ. ಪತಿ/ಪತ್ನಿ ಪ್ರಕರಣ, ಅನಾರೋಗ್ಯ ಕಾರಣ, ಅಂಗವಿಕಲರು, ಶಿಕ್ಷಕರ ಸೇವಾ ಮಾಹಿತಿ ಅಪ್ಲೋಡ್ ಮಾಡುವಲ್ಲಿ ತಡವಾಗುತ್ತಿದೆ. ಹೀಗಾಗಿ, ನಾಲ್ಕು ದಿನ ಮುಂದೂಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಬಡ್ತಿಗೆ ಒತ್ತಾಯ: ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟಿಸುವುದಕ್ಕೂ ಮೊದಲು ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರಿಗೆ, ಮುಖ್ಯ ಶಿಕ್ಷಕರಿಂದ ಹಿರಿಯ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ನೀಡುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂ ಸರ್ಕಾರವನ್ನು ಒತ್ತಾಯಿಸಿದೆ. ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ ಆಧಾರದಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಬೇಕು. ಇದೇ ವೇಳೆ ವರ್ಗಾವಣೆ ಬಯಸುವ ಶಿಕ್ಷಕರನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರು, ಚಿತ್ರಕಲೆ, ಹಿಂದಿ ಶಿಕ್ಷಕರನ್ನು ಹೆಚ್ಚುವರಿ ಪ್ರಕ್ರಿಯೆಯಿಂದ ಕೈಬಿಡಬೇಕು. ಶಿಕ್ಷಕರ ಸಂದ ಚುನಾಯಿತ ಪದಾಧಿಕಾರಿಗಳಿಗೆ ವಿನಾಯಿತಿ ನೀಡಿ ತಾಲೂಕಿನೊಳಗೆ ಸ್ಥಳ ನಿಯೋಜನೆಗೆ ಅವಕಾಶ ಕಲ್ಪಿಸುವಂತೆ ಸಂದ ಆಧ್ಯಕ್ಷ ಶಂಭುಲಿಂಗನಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಒತ್ತಾಯಿಸಿದ್ದಾರೆ.