ಪೌತಿ ಖಾತೆದಾರರಿಗೆ ಕಂದಾಯ ಸಚಿವರಿಂದ ಗುಡ್ ನ್ಯೂಸ್ : ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ಸೌಲಭ್ಯ

ಬೆಂಗಳೂರು : ಪೌತಿಖಾತೆ ಆಂದೋಲನದ ಮೂಲಕ ಆಸ್ತಿಯ ಖಾತೆ ಹಕ್ಕುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಆಡಳಿತಾತ್ಮಕ ಮಹತ್ವದ ಸುಧಾರಣೆ ಬಂದಿದೆ.ಪೌತಿ ಖಾತೆ ಹೊಂದಿದ ಖಾತೆದಾರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ದೊರೆಯುವ ಆರ್ಥಿಕ ಸೌಕರ್ಯಗಳನ್ನು ಕೂಡ ತ್ವರಿತವಾಗಿ ತಲುಪಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯಲ್ಲಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪೌತಿಖಾತೆ ಆಂದೋಲನದಲ್ಲಿ ಖಾತೆ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು,
ರೈತ ಕುಟುಂಬಗಳು ತಮ್ಮ ಆಸ್ತಿಗಳನ್ನು ಭಾಗ ಮಾಡಿಕೊಳ್ಳುವುದು ಈ ಹಿಂದೆ ಬಹಳ ಸವಾಲಿನ ಕಾರ್ಯವೆನಿಸಿತ್ತು.ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ,ಪೌತಿ ಖಾತೆ ಆಂದೋಲನದ ಪರಿಣಾಮವಾಗಿ ಜನರ ಮನೆ ಬಾಗಿಲಿಗೆ ದಾಖಲೆಗಳು ಬರುವಂತಾಗಿದೆ.ಆಸ್ತಿಯಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕುಗಳು ಇವೆ,ಯಾವುದೇ ಅನಗತ್ಯ ತಂಟೆ,ತಕರಾರುಗಳಿಗೆ ಅವಕಾಶವಾಗದಂತೆ ನ್ಯಾಯಯುತ ಮಾರ್ಗದಲ್ಲಿ ಆಸ್ತಿ ವಿಭಜನೆ ಮಾಡಿಕೊಂಡು ಪ್ರತಿಯೊಬ್ಬರು ತಮ್ಮ ಪಾಲಿನ ಖಾತೆಗಳನ್ನು ಹೊಂದಿದರೆ, ಸರ್ಕಾರದ ವಿವಿಧ ಯೋಜನೆಗಳು ಮತ್ತು ಸಾಲ ಸೌಲಭ್ಯಗಳನ್ನು ಪಡೆಯಲು ಸುಲಭವಾಗುತ್ತದೆ ಎಂದರು.
ಪೌತಿಖಾತೆಗೆ ಅರ್ಜಿ ಸಲ್ಲಿಸಿದ್ದ 17 ಕುಟುಂಬಗಳಿಗೆ ಸಚಿವರು ಆಸ್ತಿಖಾತೆ ದಾಖಲೆಗಳನ್ನು ವಿತರಿಸಿದರು.ಪೌತಿಖಾತೆಗೆ ಅರ್ಜಿ ಸಲ್ಲಿಸಿ ನೋಟಿಸ್ ಅವಧಿಯಲ್ಲಿರುವ 98 ಜನರಿಗೂ ವಿಳಂಬ ಮಾಡದೇ ಖಾತೆ ಪತ್ರಗಳನ್ನು ವಿತರಿಸಿದರು. ನಂತರ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಸಚಿವರಾದ ಎನ್.ನಾಗರಾಜು(ಎಂಟಿಬಿ),ಜಿಲ್ಲಾಧಿಕಾರಿ ಆರ್.ಲತಾ,ಉಪವಿಭಾಗಾಧಿಕಾರಿ ತೇಜಸ್ ಕುಮಾರ್,ತಹಸೀಲ್ದಾರ ಮಹೇಶಕುಮಾರ್ ಮತ್ತಿತರರು ಇದ್ದರು
ಮುಚ್ಚು ಹರಾಜು ಕಟ್ಟೆ ಉದ್ಘಾಟನೆ
ಹೊಸಕೋಟೆ ಎಪಿಎಂಸಿಯು ರೇಷ್ನೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ಜಮೀನಿನಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ನಿರ್ಮಿಸಿರುವ ನೂತನ ಕಾಂಕ್ರೀಟ್ ಮುಚ್ಚು ಹರಾಜು ಕಟ್ಟೆಯನ್ನು ಸಚಿವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.