ಪೊಲೀಸ್ ಠಾಣೆಯಲ್ಲಿ ಕುಸಿದು ಬಿದ್ದ ವ್ಯಕ್ತಿ ಸಾವು; ಎಸ್‌ಐ ಅಮಾನತು

ಪೊಲೀಸ್ ಠಾಣೆಯಲ್ಲಿ ಕುಸಿದು ಬಿದ್ದ ವ್ಯಕ್ತಿ ಸಾವು; ಎಸ್‌ಐ ಅಮಾನತು

ಕೊಚ್ಚಿ: ಕೊಚ್ಚಿಯಲ್ಲಿ ವ್ಯಕ್ತಿಯೊಬ್ಬ ಕಸ್ಟಡಿಯಲ್ಲಿ ಸಾವನ್ನಪ್ಪಿದ ಆರೋಪದ ಮೇಲೆ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇರುಂಪನಂ ಮೂಲದ 52 ವರ್ಷದ ಮನೋಹರನ್ ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಶನಿವಾರ ರಾತ್ರಿ ನಿಯಮಿತ ತಪಾಸಣೆ ವೇಳೆ ಮನೋಹರನ್ ತನ್ನ ವಾಹನವನ್ನು ನಿಲ್ಲಿಸದ ಕಾರಣ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಪೊಲೀಸ್ ಠಾಣೆಯೊಳಗೆ ಕುಸಿದು ಬಿದ್ದ ಅವರನ್ನು ತ್ರಿಪುಣಿತುರಾ ತಾಲೂಕು ಆಸ್ಪತ್ರೆಗೆ ಕರೆದೊಯ್ದು, ನಂತರ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಮನೋಹರನ್‌ಗೆ ಥಳಿಸಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದ್ರೆ, ಸಿಸಿಟಿವಿ ದೃಶ್ಯಗಳು ಘಟನೆಯನ್ನು ಸಾಬೀತುಪಡಿಸಿವೆ. ಮನೋಹರನ್ ಹೆಲ್ಮೆಟ್ ತೆಗೆದ ನಂತರ ಪೊಲೀಸರು ಆತನ ಕೆನ್ನೆಗೆ ಬಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಕುಡಿದಿಲ್ಲದಿದ್ದರೂ ಅವರನ್ನು ಠಾಣೆಗೆ ಕರೆದೊಯ್ದು ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಏತನ್ಮಧ್ಯೆ, ಮರಣೋತ್ತರ ಪರೀಕ್ಷೆಯ ವರದಿಯು ಮನೋಹರನ್‌ಗೆ ಹೃದಯ ಸ್ತಂಭನವಾಗಿದೆ ಮತ್ತು ಹೃದಯ ಸಂಬಂಧಿ ಕಾಯಿಲೆಯ ಲಕ್ಷಣಗಳನ್ನು ಹೊಂದಿದ್ದು, ಅವರ ಸಾವಿಗೆ ಕಾರಣವಾಯಿತು ಎಂದು ವರದಿಯಾಗಿದೆ.

ರಾಜ್ಯ ಮಾನವ ಹಕ್ಕುಗಳ ಆಯೋಗವೂ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೊಚ್ಚಿ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ.
ಸಾವಿನ ನಂತರ, ಮನೋಹರನ್ ಅವರ ಕುಟುಂಬ ಮತ್ತು ವಿರೋಧ ಪಕ್ಷಗಳು ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು.