ಪಠಾಣ್ ಚಿತ್ರ ಪ್ರದರ್ಶಿಸದಂತೆ ಕಲಬುರಗಿ, ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ಕಲಬರುಗಿ : ಇಂದು ವಿಶ್ವಾದ್ಯಂತ ನಟ ಶಾರೂಖ್ ಖಾನ್ ನಟನೆಯ ಪಠಾಣ್ ಚಿತ್ರ ಬಿಡುಗಡೆಯಾಗಿದ್ದು, ಕಲಬುರಗಿ ಮತ್ತು ಬೆಳಗಾವಿಯಲ್ಲಿ ಪಠಾಣ್ ಚಿತ್ರ ಪ್ರದರ್ಶನ ವಿರೋಧಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಕಲಬುರಗ ನಗರದ ಶೆಟ್ಟಿ ಮಲ್ಟಿಫ್ಲೆಕ್ಸ್ ನ ಮುಂದೆ ಪಠಾಣ್ ಚಿತ್ರ ಪ್ರದರ್ಶನ ವಿರೋಧಿಸಿ ಹಿಂದೂ ಜಾಗೃತಿ ಸೇನೆ ಪ್ರತಿಭಟನೆ ನಡೆಸಿದೆ.
ಬೆಳಗಾವಿಯಲ್ಲಿ ಪಠಾಣ್ ಚಿತ್ರ ಪ್ರದರ್ಶಿಸದಂತೆ ಒತ್ತಾಯಿಸಿ ನಗರದ ಸ್ವರೂಪ್ ಚಿತ್ರಮಂದಿರದ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಚಿತ್ರಮಂದಿರ ಬಳಿ ಹಾಕಿದ್ದ ಪಠಾಣ್ ಬ್ಯಾನರ್ ಹರಿದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಆಗಮಿಸಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.