ಸೈಲೆಂಟ್ ಸುನೀಲನಿಗೆ ಪೊಲೀಸ್ ಎಸ್ಕಾರ್ಟ್​​; ಆತನ ಮೇಲೆ ಯಾವುದೇ ವಾರಂಟ್ ಇಲ್ಲ ಎಂದ ಪೊಲೀಸ್ ಆಯುಕ್ತ

ಸೈಲೆಂಟ್ ಸುನೀಲನಿಗೆ ಪೊಲೀಸ್ ಎಸ್ಕಾರ್ಟ್​​; ಆತನ ಮೇಲೆ ಯಾವುದೇ ವಾರಂಟ್ ಇಲ್ಲ ಎಂದ ಪೊಲೀಸ್ ಆಯುಕ್ತ

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಸಮಯ ಹತ್ತಿರವಾಗುತ್ತಿದಂತೆ ಹೊಸ ಹೊಸ ಟಿಕೆಟ್ ಆಕಾಂಕ್ಷಿಗಳು ಮುನ್ನಲೆಗೆ ಬರುತ್ತಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದವರೆಲ್ಲಾ ಇದೀಗ ಸಮಾಜದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದೀಗ ಮಾಜಿ ರೌಡಿ ಸೈಲೆಂಟ್ ಸುನೀಲನ ಸರದಿ.

ನಿನ್ನೆ (ನ.27) ಸೈಲೆಂಟ್ ಸುನೀಲ್ ನೇತೃತ್ವದಲ್ಲಿ ಚಾಮರಾಜಪೇಟೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆದಿತ್ತು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಕಾಣಿಸಿಕೊಂಡಿದ್ದು, ಸೈಲೆಂಟ್​​ ಸುನೀಲ್ ಚಾಮರಾಜಪೇಟೆ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾನೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿವೆ. ಈ ಬೆಳವಣಿಗೆ ಆಗುತ್ತಿದ್ದಂತೆ ಸಾಕಷ್ಟು ರಾಜಕೀಯ ಮಾತುಗಳು ಕೇಳಿ ಬರುತ್ತಿವೆ.

ಸೈಲೆಂಟ್ ಸುನೀಲ್ ವಿಚಾರವಾಗಿ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ ಎಂಬೆಲ್ಲಾ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ. ಸಿಸಿಬಿ ಪೊಲೀಸರ ರೋಷವೆಲ್ಲಾ ಕೇವಲ ಪುಡಿ ರೌಡಿಗಳ ಮೇಲೆ ಮಾತ್ರ. ಡಾನ್​ಗಳನ್ನು ಕಂಡರೆ ಪೊಲೀಸರೇ ನಡುಗುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಪುಡಿರೌಡಿಗಳ ಮೇಲೆ‌ ದರ್ಪ ತೋರಿಸೋ ಪೊಲೀಸರು ಸೈಲೆಂಟ್ ಸುನಿಲ್ ವಿಚಾರದಲ್ಲಿ ಯಾಕೆ ಮೌನವಾಗಿದ್ದಾರೆ? ರೌಡಿಗಳ ಮನೆ ಮೇಲೆ ದಾಳಿ ಮಾಡುವ ಸಿಸಿಬಿ ಪೊಲೀಸರು, ಪುಡಿ ರೌಡಿಗಳನ್ನ ಕರೆದುಕೊಂಡು ಬಂದು ಪ್ರತಾಪ ತೋರಿಸುತ್ತಾರೆ. ಆದರೆ ಪ್ರಮುಖ ರೌಡಿಗಳಾದ ಸೈಲೆಂಟ್ ಸುನೀಲ್, ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಒಂಟೆ ರೋಹಿತ, ಕಾಡುಬೀಸನಹಳ್ಳಿ ರೋಹಿತ, ಕಾಡಬೀಸನಹಳ್ಳಿ ಲೋಕಿ ಪರಾರಿಯಾಗಿದ್ದಾರೆಂದು ಸಿಸಿಬಿ ಪೊಲೀಸರು ಹೇಳಿದ್ದರು.

ಅಂದು ಪರಾರಿಯಾಗಿದ್ದಾರೆಂದು ಹೇಳಿದ್ದ ಸೈಲೆಂಟ್ ಸುನೀಲ್​ ನಿನ್ನೆ ಬಹಿರಂಗವಾಗಿ ಹೇಗೆ ಕಾಣಿಸಿಕೊಂಡಿದ್ದ? ಅದರಲ್ಲೂ ರಾಜಕಾರಣಿಗಳ ಕಾರ್ಯಕ್ರಮದಲ್ಲೇ ಕಾಣಿಸಿಕೊಂಡ ಸೈಲೆಂಟ್ ಸುನೀಲ್, ರಾಜಕೀಯ ಸೇರ್ಪಡೆಯಾಗುವ ಸಂದೇಶ ನೀಡಿದ್ದಾನೆ. ಬಹಿರಂಗ ಸಮಾವೇಶ ಮಾಡಿದರೂ ಸಿಸಿಬಿ ಪೊಲೀಸರು ಮಾತ್ರ ಸುಮ್ಮನಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಸೈಲೆಂಟ್ ಸುನೀಲ್ ಕಾರ್ಯಕ್ರಮ ಆಯೋಜನೆ ಹಿನ್ನೆಲೆಯಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಇದೀಗ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ. ಸೈಲೆಂಟ್ ಸುನೀಲನ ಬಗ್ಗೆ ಸದ್ಯ ಯಾವುದೇ ವಾರೆಂಟ್ ಇಲ್ಲ. ಆದರೂ ಈಗ ಆತನ ಬಗ್ಗೆ ವಿಚಾರಣೆ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನು ಪೊಲೀಸರು ಎಸ್ಕಾರ್ಟ್ ಮಾಡಿ ಸುನೀಲನನ್ನು ಕರ್ಕೊಂಡು ಹೋಗಿದ್ದ ವಿಚಾರದ ಬಗ್ಗೆಯೂ ತನಿಖೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.