ಪಕ್ಷ ಕಟ್ಟುವಾಗ ನಾನೊಬ್ಬನೇ ಇದ್ದೆ; ಆರ್ಎಸ್ಎಸ್ ಕಾರಣದಿಂದ ಇಷ್ಟು ಎತ್ತರಕ್ಕೇರಿದ್ದೇನೆ ಎಂದ ಬಿಎಸ್ವೈ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟುವಾಗ ನಾನು ಒಬ್ಬನೇ ಇದ್ದೆ. ನನ್ನ ರಾಜಕೀಯ ಜೀವನದಲ್ಲಿ ನಾಡಿನ ಜ್ವಲಂತ ಸಮಸ್ಯೆಗಳಿಗೆ ಬಗ್ಗೆ ಪ್ರಾಮಾಣಿಕವಾಗಿ ಹೋರಾಟ ಮಾಡಿದ್ದೇನೆ. ನಾನಿಂದು ಇಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರೆ ಅದಕ್ಕೆ ಆರ್ಎಸ್ಎಸ್ ಕಾರಣ.
ನಮಗೆಲ್ಲರಿಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಆದರ್ಶ. ಇಳಿ ವಯಸ್ಸಿನಲ್ಲೂ ದೇಶದ ಸಮಸ್ಯೆಗಳ ಬಗ್ಗೆ ಕಾಳಜಿ ತೋರಿಸಿ ಮಾತನಾಡುತ್ತಾರೆ. ಇದು ಸಾಮನ್ಯ ವಿಚಾರವಲ್ಲ. ಅವರಿಂದ ಪ್ರತಿಯೊಬ್ಬ ರಾಜಕಾರಣಿಯೂ ಕಲಿಯುವುದು ಬಹಳಷ್ಟಿದೆ ಎಂದು ಬಿಎಸ್ವೈ ಸದನದಲ್ಲಿ ಮಾತನಾಡುತ್ತಾ ಹೇಳಿದರು. ಪ್ರಸ್ತುತ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಂದಿನ ಅಧಿವೇಶನದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಬೇಕು. ಈ ಸದನಕ್ಕೆ ಮಹಿಳೆಯರು ಹೆಚ್ಚು ಆಯ್ಕೆಯಾಗಿ ಬರಬೇಕು ಎಂದರು
ಸದನದಲ್ಲಿ ಭಾವುಕರಾಗಿ ಬಿಎಸ್ವೈ ಮಾತನಾಡುತ್ತಾ, ಇದೇ ತಿಂಗಳು 27ನೇ ತಾರೀಖಿಗೆ ನನಗೆ 80 ವರ್ಷ ತುಂಬುತ್ತದೆ. ನನ್ನ ಹುಟ್ಟುಹಬ್ಬದ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡುತ್ತಿದ್ದಾರೆ. ಇದು ನನ್ನ ಕೊನೆಯ ಅಧಿವೇಶನ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಅಧಿಕಾರಕ್ಕೆ ಬರುವಂತಹ ಕೆಲಸ ಮಾಡುತ್ತೇನೆ. ಪ್ರಸ್ತುತ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಫಲ ಕೊಡುತ್ತದೆ. ಸೂರ್ಯ ಚಂದ್ರ ಎಷ್ಟು ಸತ್ಯವೋ, ಅಷ್ಟೇ ಸತ್ಯ ಬಿಜೆಪಿ ಅಧಿಕಾರಕ್ಕೆ ಬರುವುದು ಎಂದು ಹೇಳಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಳಷ್ಟು ಅಧ್ಯಯನ ಮಾಡಿ ಸದನದಲ್ಲಿ ಮಾತನಾಡುತ್ತಾರೆ ಎಂದು ಹೇಳಿದರು.