'ಪಂಚರತ್ನ ಯೋಜನೆ' ಜಾರಿಯಲ್ಲಿ ರಾಜಕಾರಣಿ, ಅಧಿಕಾರಿಗಳಿಗೆ ಪರ್ಸಂಟೇಜ್ ಇರುವುದಿಲ್ಲ - HDK

'ಪಂಚರತ್ನ ಯೋಜನೆ' ಜಾರಿಯಲ್ಲಿ ರಾಜಕಾರಣಿ, ಅಧಿಕಾರಿಗಳಿಗೆ ಪರ್ಸಂಟೇಜ್ ಇರುವುದಿಲ್ಲ - HDK

ಬಿಡದಿ/ರಾಮನಗರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಈ ಯೋಜನೆಗಳಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಪರ್ಸಂಟೇಜ್ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಮಾತುಗಳಲ್ಲಿ ಹೇಳಿದರು.

ಬಿಡದಿಯ ತಮ್ಮ ತೋಟದಲ್ಲಿ ರೈತ ಸಂಕ್ರಾಂತಿ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು; ಈ ಯೋಜನೆಗಳನ್ನು ಅತ್ಯಂತ ಬದ್ಧತೆ ಹಾಗೂ ಜನರ ತೆರಿಗೆ ಹಣದಿಂದ ಕಾರ್ಯಗತ ಮಾಡಲಾಗುತ್ತದೆ. ಒಂದು ನಯಾಪೈಸೆ ಪೋಲಾಗಲು ಬಿಡುವುದಿಲ್ಲ. ಜನರ ಕಷ್ಟದ ಹಣಕ್ಕೆ ನಾನೇ ಕಾವಲುಗಾರನಾಗಿ ಇರುತ್ತೇನೆ ಎಂದರು.

ಪಂಚರತ್ನ ಕಾರ್ಯಕ್ರಮಗಳನ್ನು ಎಷ್ಟು ವೈಜ್ಞಾನಿಕವಾಗಿ ರೂಪಿಸಲಾಗಿದೆಯೋ ಅಷ್ಟೇ ವೈಜ್ಞಾನಿಕವಾಗಿ, ಬದ್ಧತೆಯಿಂದ ಜಾರಿ ಮಾಡಲಾಗುವುದು. ಇಂದು ಪಂಚಾಯಿತಿಯಲ್ಲಿ ಇರಲೇಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಪ್ರತಿಯೊಬ್ಬರ ಶಾಶ್ವತ ಉತ್ತಮ ಬದುಕಿಗೆ ಈ ಕಾರ್ಯಕ್ರಮ ಅನುಕೂಲಕರ. ಜನತೆಯ ದುಡ್ಡು ಜನತೆಗೆ ಹೋಗಬೇಕು. ಯಾವ ಕಾರಣಕ್ಕೂ ರಾಜಕಾರಣಿಗಳು, ಅಧಿಕಾರಿಗಳಿಗೆ ಈ ಐದು ಕಾರ್ಯಕ್ರಮದಲ್ಲಿ ಪರ್ಸೆಂಟೇಜ್ ಇರೋದಿಲ್ಲ ಎಂದು ಅವರು ಒತ್ತಿ ಹೇಳಿದರು.

ಪಂಚರತ್ನ ಯೋಜನೆಗಳ ಜಾರಿಗಾಗಿ ಪಂಚಾಯ್ತಿಯಲ್ಲೇ ಮೇಲ್ವಿಚಾರಣೆ ಸಮಿತಿ ರಚನೆ ಮಾಡಲಾಗುವುದು. ಹಣದ ದುರ್ಬಳಕೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ರಾಜ್ಯದ ಜನತೆಯ ತೆರಿಗೆ ಹಣ ಪೋಲಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.