ನೀರಿನ ವಹಿವಾಟು ಆರಂಭಿಸಲು ಅದಾನಿ ಚಿಂತನೆ!

ಮುಂಬೈ: ನೀರು ಶುದ್ಧೀಕರಣ, ಸಂಸ್ಕರಣೆ ಹಾಗೂ ವಿತರಣೆ ಉದ್ಯಮವನ್ನು ಪ್ರವೇಶಿಸುವ ಆಲೋಚನೆ ಇರುವುದಾಗಿ ಅದಾನಿ ಎಂಟರ್‌ಪ್ರೈಸಸ್ ಗುರುವಾರ ತಿಳಿಸಿದೆ.
ಅದಾನಿ ಸಮೂಹವು ಮೂಲಸೌಕರ್ಯ ವಲಯದ ಬಂದರು, ವಿಮಾನ ನಿಲ್ದಾಣ, ರಸ್ತೆ, ಎಕ್ಸ್‌ಪ್ರೆಸ್ ಹೆದ್ದಾರಿ, ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ವಹಿವಾಟುಗಳಲ್ಲಿ ಈಗಾಗಲೇ ತೊಡಗಿಸಿಕೊಂಡಿದೆ.
ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒ ಜನವರಿ 27ರಿಂದ ಆರಂಭವಾಗಲಿದ್ದು, ಪ್ರತಿ ಷೇರಿಗೆ ₹ 3,112-₹ 3,276 ಬೆಲೆ ನಿಗದಿ ಮಾಡಲಾಗಿದೆ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್ ಸಿಂಗ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
'ಮೂಲಸೌಕರ್ಯ ವಲಯದಲ್ಲಿ ದೊಡ್ಡ ಕಂಪನಿಯಾಗಿ, ನಾವು ನೀರಿನ ವಹಿವಾಟಿನಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದೇವೆ' ಎಂದು ಸಿಂಗ್ ತಿಳಿಸಿದ್ದಾರೆ. ಈ ವಿಚಾರವಾಗಿ ಅವರು ಹೆಚ್ಚಿನ ವಿವರಗಳನ್ನು ನೀಡಿಲ್ಲ.
'ನಾವು ಈಗ ಇದರಲ್ಲಿನ ಅವಕಾಶಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಜಂಟಿ ಪಾಲುದಾರಿಕೆ, ಸ್ವಾಧೀನ ಸಾಧ್ಯತೆಯ ಬಗ್ಗೆ ಪರಿಶೀಲಿಸುತ್ತಿದ್ದೇವೆ' ಎಂದು ಸಿಂಗ್ ಹೇಳಿದ್ದಾರೆ.