ನಾಳೆ ಜೆಡಿಎಸ್ ಪಕ್ಷದ ಎರಡನೇ ಪಟ್ಟಿ ಬಿಡುಗಡೆ - ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಣೆ

ನಾಳೆ ಜೆಡಿಎಸ್ ಪಕ್ಷದ ಎರಡನೇ ಪಟ್ಟಿ ಬಿಡುಗಡೆ - ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಣೆ

ಬೆಂಗಳೂರು: ಈಗಾಗಲೇ ಜೆಡಿಎಸ್ ಪಕ್ಷದಿಂದ ( JDS Party ) ಮೊದಲ ಪಟ್ಟಿಯನ್ನು ಪ್ರಕಟಿಸಲಾಗಿದೆ. ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ( JDS Candidate List ) ಯಾವಾಗ ಪ್ರಕಟಿಸಲಾಗುತ್ತದೆ ಎಂಬುದಕ್ಕೆ ಪ್ರತಿಕ್ರಿಯಿಸಿರುವಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ( Farmer CM HD Kumaraswamy ), ನಾಳೆಯೇ ಬಿಡುಗಡೆ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಬಸವನಗುಡಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮಿಂಚಿನ ಸಂಚಾರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಸಂಜೆ ನಗರದ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ವಿವಿಧ ನಾಯಕರು ಹಾಗೂ ಕೆಲ ಹಿರಿಯ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಸಭೆಗಳನ್ನು ನಡೆಸಿದರು.

ಭೇಟಿಗೂ ಮುನ್ನ ಅವರು ಶ್ರೀ ಬಂಡೆ ಮಹಾಕಾಳಿ ಅಮ್ಮನವರಿಗೆ ಪೂಜೆ ಸಲ್ಲಿಸಿದರು. ಪೂಜೆಯ ವೇಳೆ ಬಸವನಗುಡಿ ವಿಧಾನಸಭೆ ಕ್ಷೇತ್ರ ಜೆಡಿಎಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಅಮ್ಮನವರ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು.

ಈ ಪ್ರಣಾಳಿಕೆಯನ್ನೂ ಪತ್ರವನ್ನು ಎಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್ ಅವರಿಗೆ ಹಸ್ತಾರಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಸದಸ್ಯ ರಮೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು. ಮುಖಂಡರ ಮನೆಗಳಿಗೆ ಭೇಟಿಯ ವೇಳೆ ಕ್ಷೇತ್ರದ ಎಲ್ಲಾ ಪ್ರಮುಖ ಮುಖಂಡರು ಹಾಜರಿದ್ದರು.

ಮುಖಂಡರ ಮನೆಗಳಿಗೆ ಭೇಟಿ ನನಗೆ ಬಹಳ ಸಂತಸ ಉಂಟು ಮಾಡಿದೆ. ಬಸವನಗುಡಿ ಜನತಾ ಪರಿವಾರದ ಹಿಡಿತ ಹೊಂದಿದ್ದ ಕ್ಷೇತ್ರ. ಈ ಬಾರಿ ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀ ಬಂಡೆ ಮಹಾಕಾಳಿ ಅಮ್ಮನವರಿಗೆ ಪೂಜೆ ಸಲ್ಲಿಸಿದ ನಂತರ ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಎಟಿ ರಾಮಸ್ವಾಮಿ ಆರೋಪದ ಬಗ್ಗೆ

ಪಕ್ಷ ಬಿಟ್ಟ ಎ.ಟಿ.ರಾಮಸ್ವಾಮಿ ಅವರು ನನ್ನ ಮೇಲೆ ಆರೋಪ ಮಾಡುವುದಕ್ಕೆ ಹಾಸನದ ವಿಚಾರದಲ್ಲಿ ನಾನು ಯಾವುದೇ ನಿರ್ಣಯ ಮಾಡಿಲ್ಲ. ಎರಡು ಮೂರು ವರ್ಷದಲ್ಲಿ ಏನೆಲ್ಲ ನಡೆದಿದೆ ಎಂದು ಸೂಕ್ಷ್ಮವಾಗಿ ನೋಡಿದ್ದೇವೆ. ಇವತ್ತಿನ ಘಟನೆಗೆ ಏನಾದರೂ ಕಾರಣ ನೀಡಬೇಕಲ್ಲ, ಅದಕ್ಕೆ ಅವರು ಹಾಗೆ ಹೇಳಿದ್ದಾರೆ. ನಾನು ಅದಕ್ಕೆ ಸಮಜಾಯಿಷಿ ಕೊಡೋಕೆ ಹೋಗೊದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ

ಚನ್ನಪಟ್ಟಣ ಬಿಟ್ಟರೆ ಅನ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಪುರುಚ್ಚರಿಸಿದ ಕುಮಾರಸ್ವಾಮಿ ಅವರು, ಅಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿ ಆಗುತ್ತಾರೆ ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ಮುಖ್ಯ ಅಲ್ಲ ನನಗೆ ಎಂದರು.

ನಾನು ಈಗಾಗಲೇ ಚನ್ನಪಟ್ಟಣದಲ್ಲಿ ನಿಲ್ಲಬೇಕು ಎಂದು ಪಕ್ಷ, ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ. ಬೇರೆ ಕ್ಷೇತ್ರದಲ್ಲಿ ಹೋಗಿ ಅರ್ಜಿ‌ ಹಾಕಿಕೊಳ್ಳುವ ಪ್ರಶ್ನೆ ಇಲ್ಲ. ಚನ್ನಪಟ್ಟಣ ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿ ನಿಲ್ಲುವ ಮಾತಿಲ್ಲ ಎಂದು ಅವರು ಹೇಳಿದರು.

ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆಗೆ ಬಿಎಸ್ ಯಡಿಯೂರಪ್ಪ ಅವರ ನಕಾರ ಹಿನ್ನೆಲೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರು ಮಾಡಿಕೊಂಡಿರುವ ತೀರ್ಮಾನ. ನಮ್ಮ ಅಭ್ಯರ್ಥಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಎಲ್ಲಾ ಕ್ಷೇತ್ರಗಳಿಗೆ ಹೋದಂತೆ ವರುಣಾಗೂ ಪ್ರಚಾರಕ್ಕೆ ಹೋಗ್ತೀನಿ.ವರುಣಾ ಕ್ಷೇತ್ರದಲ್ಲಿ ಯಾವ ರೀತಿ ತಂತ್ರಗಾರಿಕೆ, ಪ್ರಚಾರ ಮಾಡಬೇಕು ಎಂಬುದನ್ನ ಸ್ಥಳೀಯ ನಾಯಕರು ತೀರ್ಮಾನ ಮಾಡ್ತಾರೆ ಎಂದರು.

ಖೂಬಾ ಮನೆಗೆ ವಾಪಸ್ ಆಗಿದ್ದಾರೆ

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಜೆಡಿಎಸ್ ಸೇರ್ಪಡೆ ಆಗಿದ್ದಾರೆ. ಅವರ ಮನೆಗೆ ಅವರು ವಾಪಸ್ ಬಂದಿದ್ದಾರೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.