ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ಪ್ರಿಯ ಕಾಂಗ್ರೆಸ್ಸಿನ ಕಾರ್ಯಕರ್ತರಿಗೆ ಪ್ರೀತಿಯ ನಮಸ್ಕಾರ. ಸೈದ್ಧಾಂತಿಕವಾಗಿ ನಾವು ಕಿತ್ತಾಡಬಹುದು. ವೈಚಾರಿಕ ಮತಭೇದ ಖಂಡಿತ ಇದ್ದಿರಬಹುದು. ಕೆಲವೊಮ್ಮೆ ಹದ ಮೀರಿ ಕಾಲೆಳೆದಿರಬಹುದು, ಅಪಹಾಸ್ಯವನ್ನೂ ಮಾಡಿರಬಹುದು. ಆದರೆ, ದೇಶದ ವಿಚಾರ ಬಂದಾಗ ಮಾತ್ರ ನಮ್ಮಲ್ಲಿ ಮತಭೇದ ಇರುವಂತಿಲ್ಲ.

ರಾಷ್ಟ್ರ ನನಗಿಂತಲೂ, ಒಂದು ಪರಿವಾರಕ್ಕಿಂತಲೂ, ಒಂದು ಊರಿಗಿಂತಲೂ ಬಲು ದೊಡ್ಡದ್ದು. ಹೀಗಾಗಿಯೇ ಬಲುಮುಖ್ಯವಾದ ಕೆಲವು ಸಂಗತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲೆಂದು ಈ ಪತ್ರ.

ಅನೇಕ ಸಂಗತಿಗಳ ಕುರಿತಂತೆ ನಾವು ನಿಮ್ಮನ್ನು ವಿರೋಧಿಸುವುದಿದೆ. ಸರದಾರ್ ಪಟೇಲರಿಂದ ಅಧಿಕಾರವನ್ನು ಕಸಿದುಕೊಂಡ ಜವಾಹರ್​ಲಾಲ್ ನೆಹರೂ ಬಗ್ಗೆ ಬೇಸರವಿದೆ. ಆದರೆ, ನಾವದನ್ನು ಮರೆತಿದ್ದೇವೆ. ಬಾಬಾಸಾಹೇಬ್ ಅಂಬೇಡ್ಕರರ ಸಂವಿಧಾನವನ್ನು ಇಂದಿರಾ ಗಾಳಿಗೆ ತೂರಿ ಎಲ್ಲ ಸ್ವಾತಂತ್ರ್ಯವನ್ನು ಕಸಿಯುವ ತುರ್ತು ಪರಿಸ್ಥಿತಿಯನ್ನು ಹೇರಿ ಭಾರತದ ಇತಿಹಾಸದಲ್ಲೊಂದು ಆರದ ಗಾಯವನ್ನು ಮಾಡಿಬಿಟ್ಟರಲ್ಲ, ನಾವದನ್ನು ನೆನಪಿಸಿಕೊಳ್ಳುವುದಿಲ್ಲ. ರಾಜೀವ್ ತೀರಿಕೊಂಡಾಗ ಸಿಖ್ಖರ ಹತ್ಯೆಯನ್ನು ನೀವೆಲ್ಲ ಸೇರಿ ಮಾಡಿದ್ದಿರಲ್ಲ, ಆ ಕುರಿತು ಸಿಖ್ಖರ ಕಣ್ಣೀರೇ ಇಂಗಿಹೋಗಿಬಿಟ್ಟಿದೆ, ಇನ್ನು ನಮ್ಮದೇನು ಲೆಕ್ಕ! ವಿಷಯ ಬಂತೆಂದೆ ನೆನಪಿಸಿಬಿಡುತ್ತೇನೆ. ಗೋಡ್ಸೆಯು ಗಾಂಧಿಯವರ ಹತ್ಯೆ ಮಾಡಿದ ಎಂಬ ಕಾರಣಕ್ಕೆ ಚಿತ್ಪಾವನ ಬ್ರಾಹ್ಮಣರನ್ನು ಅಟ್ಟಾಡಿಸಿ ಕೊಂದಿರಲ್ಲ, ಪಾಪ ಆ ಮಂದಿಯೂ ಅದನ್ನು ಮರೆತು ನೀವು ಅಪ್ಪಿ-ತಪ್ಪಿ ಭಾರತ್ ಮಾತಾ ಕಿ ಎಂದರೆ ಜೈ ಎಂದು ದನಿಗೂಡಿಸುತ್ತಾರೆ. ಬಿಡಿ, ಈ ದೇಶದವರೇ ಅಲ್ಲದ ಸೋನಿಯಾ ಪ್ರಧಾನಿಯಾಗಲೆಂದು ನೀವೆಲ್ಲ ಹಠ ಹಿಡಿದು ಕುಳಿತಿರಿ. ಆಕೆಯ ಮಗ ರಾಹುಲ್ ಇತ್ತೀಚೆಗೆ ಭಾರತ್ ಜೊಡೊ ಯಾತ್ರೆಯಲ್ಲಿ ಭಾರತವನ್ನು ತುಂಡರಿಸುವ ಸಂಕಲ್ಪಗೈದವರನ್ನೆಲ್ಲ ಜೊತೆಗೂಡಿಸಿಕೊಂಡು ನಡೆದ. ಪಾಂಡವರಿದ್ದಿದ್ದರೆ ನೋಟು ಅಮಾನ್ಯೀಕರಣ ಮಾಡುತ್ತಿದ್ದರೇನು? ಎಂದಾತ ಪ್ರಶ್ನಿಸುವಾಗ ಯಾವುದೋ ಹಳ್ಳಿಯ ಮೂರನೇ ತರಗತಿಯ ಮಗುವನ್ನು ಮಾತನಾಡಿಸುತ್ತಿದ್ದೇವೇನೋ ಎನಿಸಿಬಿಡುತ್ತದೆ. ಆತನನ್ನೇ ಪ್ರಧಾನಿ ಮಾಡೋಣ ಎಂದು ನೀವಂದಾಗ ಪ್ರಜಾಪ್ರಭುತ್ವದ ಮರ್ಯಾದೆ ಕಾಪಾಡಲು ನಾವು ನಕ್ಕು ಸುಮ್ಮನಾಗಿಬಿಡುತ್ತೇವೆ. ಇನ್ನು ಈ ಪರಿವಾರದ ಅಳಿಯ ಎಂಬ ಒಂದೇ ಕಾರಣಕ್ಕೆ ರಾಬರ್ಟ್ ವಾದ್ರಾ ಪಡೆದ ಸವಲತ್ತು, ತೋರುವ ಧಿಮಾಕು ನೀವು ನೋಡಿದ್ದೀರಲ್ಲ, ಅದನ್ನೂ ನಾವು ಮನಸ್ಸಿನಲ್ಲಿಟ್ಟುಕೊಂಡಿಲ್ಲ. ಏಕೆಂದರೆ, ಇವರೆಲ್ಲರೂ ನಾಳೆ ತಮ್ಮದೇ ಒಂದು ದೇಶಕ್ಕೆ ಮರಳಿಬಿಡಬಲ್ಲರು. ನಾನು, ನೀವು ಇಲ್ಲಿಯೇ ಇರಬೇಕು. ಇದು ನಮ್ಮ ಪೂರ್ವಜರು ಜತನದಿಂದ ಕಟ್ಟಿದ ದೇಶ. ಇದು ಬೆಳೆದಷ್ಟೂ ಲಾಭವುಣ್ಣುವವರು ನಾವಷ್ಟೇ ಅಲ್ಲ, ಇಡಿಯ ಜಗತ್ತು.

ಈಗೇಕೆ ಧಾವಂತದಿಂದ ಈ ಪತ್ರವೆಂದರೆ ಜಾರ್ಜ್ ಸೊರೊಸ್ ಇತ್ತೀಚೆಗಷ್ಟೇ ಮ್ಯುನಿಚ್ ಸೆಕ್ಯುರಿಟಿ ಕಾನ್ಪರೆನ್ಸ್​ನಲ್ಲಿ ಭಾರತದ ವಿರುದ್ಧ ಗುಟುರು ಹಾಕಿದ್ದಾನೆ, ಮೋದಿ ಮತ್ತು ಅದಾನಿ ಇಬ್ಬರೂ ಆತ್ಮೀಯರು. ಅದಾನಿಯ ಕಂಪನಿ ಸ್ಟಾಕ್ ಮಾರುಕಟ್ಟೆಯಿಂದ ಹಣ ಕ್ರೋಢೀಕರಿಸಲು ಹೋಗಿ ಸೋತಿದೆ. ಆತ ಸ್ಟಾಕ್​ಗಳ ಏರುಪೇರಿಗೆ ಕಾರಣನಾದವ. ಈ ವಿಷಯದಲ್ಲಿ ಮೋದಿ ಸುಮ್ಮನಿದ್ದಾರೆ. ಅವರು ವಿದೇಶದ ಹೂಡಿಕೆದಾರರಿಗೆ ಮತ್ತು ತಮ್ಮ ಸಂಸತ್ತಿಗೆ ಉತ್ತರ ಕೊಡಬೇಕಿದೆ ಎಂದಿದ್ದಾನಲ್ಲದೆ, ಪ್ರಜಾಪ್ರಭುತ್ವವನ್ನು ಉಳಿಸಲಿಕ್ಕಾಗಿ ಭಾರತದಲ್ಲಿ ಸರ್ಕಾರವನ್ನು ಬೇಕಿದ್ದರೂ ಬದಲಾಯಿಸಬಲ್ಲೆ ಎಂಬ ಹೇಳಿಕೆ ಕೊಟ್ಟಿದ್ದಾನೆ. ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ರಾಷ್ಟ್ರೀಯವಾದಿ ನಾಯಕರನ್ನು ಕಿತ್ತುಬಿಸುಟಲು ತಾನು ಹಣ ಹೂಡುವುದಾಗಿ ದರ್ಪದಿಂದಲೇ ಹೇಳಿದ್ದ. ಆತನ ದೃಷ್ಟಿ ನರೇಂದ್ರ ಮೋದಿಯವರತ್ತಲೇ ನೆಟ್ಟಿತೆಂಬುದು ಎಂಥವನಿಗೂ ಅರಿವಾಗುವಂತಿತ್ತು.

ಅದರಲ್ಲೇನು ಮಹಾ? ಅನೇಕರು ರಾಷ್ಟ್ರದ ಪ್ರಮುಖರನ್ನು ಬದಿಗೆ ಸರಿಸಿ ಮತ್ತೊಬ್ಬರನ್ನು ಕೂರಿಸುವ ಪ್ರಯತ್ನ ಮಾಡುತ್ತಾರೆ. ಸ್ವತಃ ಭಾರತದಲ್ಲಿ 28 ಪಕ್ಷಗಳು ಒಟ್ಟಾಗಿ ಮೋದಿಯನ್ನು ಕೆಳಗಿಳಿಸಿ ತಾವುಗಳೇ ಪ್ರಧಾನಿಯಾಗಲು ಹಾತೊರೆಯುತ್ತಿದ್ದಾರೆ. ಜಾರ್ಜ್ ಸೊರೊಸ್​ದೇನು ವಿಶೇಷ? ಗಮನಿಸಬೇಕಾಗಿರುವ ಸಂಗತಿ ಇರುವುದೇ ಇಲ್ಲಿ. ಹಂಗೇರಿಯಲ್ಲಿ ಹುಟ್ಟಿದ ಸೊರೊಸ್ ಮೂಲತಃ ಯಹೂದಿ ಕುಟುಂಬಕ್ಕೆ ಸೇರಿದವ. ಆದರೆ, ನಾಜಿಗಳ ಒತ್ತಡ ತೀವ್ರವಾದಾಗ ತನ್ನನ್ನು ತಾನು ಕ್ರಿಶ್ಚಿಯನ್ ಎಂದು ಗುರುತಿಸಿಕೊಂಡು ನಾಜಿಗಳೊಂದಿಗೆ ಕಪಟವಾಡಿಕೊಂಡು ಇದ್ದುಬಿಟ್ಟ. ಓರಗೆಯ ಅನೇಕ ಯಹೂದಿಗಳನ್ನು ನಾಜಿಗಳಿಗೆ ಗುರುತಿಸಲು ಸಹಾಯ ಮಾಡಿದವ ಈತನೇ ಎಂದು ಆರೋಪಿಸಲಾಗುತ್ತದೆ. ತಾನು ನೀಡಿದ ಸಂದರ್ಶನವೊಂದರಲ್ಲಿ ಆತ ಇದನ್ನು ಪರಿಪೂರ್ಣವಾಗಿ ಏನೂ ಅಲ್ಲಗಳೆದಿಲ್ಲ. ಯಹೂದಿಗಳ ಮೇಲಿನ ಅಂದಿನ ಆಕ್ರೋಶ ಅವನಿಗೆ ಇಂದೂ ತೀರಿದಂತೆ ಕಾಣುವುದಿಲ್ಲ. ಹೀಗಾಗಿ ಇಸ್ರೇಲ್ ರಾಷ್ಟ್ರವಾಗಬೇಕು ಎಂದು ಬಯಸುತ್ತಾನಾದರೂ ಅಲ್ಲಿಯೂ ರಾಷ್ಟ್ರವಾದ ಉಳಿಯಬಾರದು ಎಂದು ತನ್ನದ್ದೇ ವಾದ ಮಂಡಿಸುತ್ತಾನೆ. 1956ರಲ್ಲಿ ಉದ್ಯೋಗವರಸಿಕೊಂಡು ನ್ಯೂಯಾರ್ಕ್​ಗೆ ಬಂದ ಸೊರೊಸ್ ಕಡು ಕಷ್ಟದಿಂದಲೇ ಮೇಲೇರಿದವ. ತನ್ನ ವ್ಯಾಪಾರಿ ಚಾಕಚಕ್ಯತೆಯನ್ನು ಬಳಸಿಕೊಂಡು ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಧಂಧೆ ಆರಂಭಿಸಿದ. ಡಬಲ್ ಈಗಲ್, ಸೊರೊಸ್ ಫಂಡ್ ಮ್ಯಾನೇಜ್​ವೆುಂಟ್ ಕಂಪನಿಗಳು ಅವನದ್ದೇ. ಆತ ಅಮೆರಿಕಾದ ಇತಿಹಾಸದಲ್ಲೇ ಒಬ್ಬ ಯಶಸ್ವಿ ಹೂಡಿಕೆದಾರ ಎಂಬ ಹೆಸರು ಮಾಡಿದ್ದಾನೆ. ನೂರು ಹರ್ಷದ್ ಮೆಹ್ತಾಗಳನ್ನು ಹಾಕಿದರೆ ಒಬ್ಬ ಸೊರೊಸ್ ಹುಟ್ಟಬಹುದೇನೋ! ಸೊರೊಸ್ ಎಷ್ಟು ಸವಾಲುಗಳನ್ನು ಮೈಮೇಲೆಳೆದುಕೊಂಡನೆಂದರೆ ಅಷ್ಟೇ ವೇಗವಾಗಿ ತನ್ನ ಕಂಪನಿಯ ಮೌಲ್ಯವನ್ನೂ ವರ್ಧಿಸುತ್ತಾ ಹೋದ. ಅನೇಕ ರಾಷ್ಟ್ರಗಳು ಆತನನ್ನು ಕ್ರಿಮಿನಲ್​ನಂತೆ ಕಾಣುತ್ತವೆ. 1992ರಲ್ಲಿ ಆತ ಬ್ರಿಟಿಷ್ ಸ್ಟಾಕ್ ಮಾರುಕಟ್ಟೆಯಲ್ಲಿ ತಾನು ಹೂಡಿದ್ದ 10 ಬಿಲಿಯನ್ ಡಾಲರ್​ಗಳನ್ನು ಏಕಾಏಕಿ ತೆಗೆದು ಇಡಿಯ ಮಾರುಕಟ್ಟೆ ಕುಸಿಯುವಂತೆ ಮಾಡಿಬಿಟ್ಟಿದ್ದ. ಅಲ್ಲಿನ ಬ್ಯಾಂಕುಗಳು ಪತರಗುಟ್ಟಿಹೋಗಿದ್ದವು. ಬ್ರಿಟಿಷ್ ಪೌಂಡು ನೋಡನೋಡುತ್ತಲೇ ಕುಸಿದುಹೋಯ್ತು. ಕುಳಿತಲ್ಲೇ ಸೊರೊಸ್ ಒಂದು ಶತಕೋಟಿ ಅಮೇರಿಕನ್ ಡಾಲರ್​ಗಳನ್ನು ಸಂಪಾದಿಸಿಬಿಟ್ಟ. ಇಂಗ್ಲೆಂಡಿನ ಬ್ಯಾಂಕು ಮುರಿದವ ಎಂದೇ ಆತನಿಗೆ ಹೆಸರು.

1997ರಲ್ಲಿ ಏಷ್ಯಾದಲ್ಲಿ ಆರ್ಥಿಕ ಸಮಸ್ಯೆ ಎದುರಾಯ್ತಲ್ಲ, ಅದರ ಹಿಂದೆ ಇದ್ದ ದೊಡ್ಡ ಕೈ ಸೊರೊಸ್​ನದ್ದೇ. ಹಾಂಗ್​ಕಾಂಗ್, ಜಪಾನ್, ದಕ್ಷಿಣ ಕೊರಿಯಾಗಳಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಮಂದಿ ಈ ಹೊತ್ತಿನಲ್ಲಿ ಆತ್ಮಹತ್ಯೆಗೆ ಶರಣಾದರು. ಅಷ್ಟೂ ಜನರ ರಕ್ತ ಮೆತ್ತಿಕೊಂಡಿರುವುದು ಸೊರೊಸ್​ನ ಕೈಗೇ! ಮಲೇಷಿಯಾದ ಪ್ರಧಾನಮಂತ್ರಿ ಮಹತಿರ್ ಮೊಹಮ್ಮದ್ ಆ ರಾಷ್ಟ್ರದ ಕರೆನ್ಸಿ ಕುಸಿಯಲು ಕಾರಣ ಸೊರೊಸ್ ಎಂದೇ ಆರೋಪಿಸುತ್ತಾರೆ. 1988ರಲ್ಲಿ ಫ್ರಾನ್ಸ್​ನಲ್ಲಿ ಸ್ಟಾಕ್ ಮಾರುಕಟ್ಟೆ ಏರುಪೇರಾಗಲು ಸೊರೊಸ್ ಕಾರಣನಾಗಿದ್ದ ಎಂಬುದಕ್ಕೆ ಅಲ್ಲಿನ ನ್ಯಾಯಾಲಯ 2002ರ ಡಿಸೆಂಬರ್​ನಲ್ಲಿ ಆತನಿಗೆ 29 ಲಕ್ಷ ಡಾಲರ್​ಗಳ ದಂಡ ವಿಧಿಸಿತ್ತು. ಕಾಲಕ್ರಮದಲ್ಲಿ ಆತನ ಕಂಪನಿ ಇತರರಿಂದ ಹಣ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟಿತು. ಈ ವೇಳೆಗಾಗಲೆ ಅನೇಕ ರಾಷ್ಟ್ರಗಳೊಂದಿಗೆ ಆಟವಾಡಿದ ಸೊರೊಸ್ ತಾನೇ ಬಿಲಿಯನೇರ್ ಆಗಿಬಿಟ್ಟಿದ್ದ. ತಾನು ಮಾಡಿದ ಯಾವ ಕೆಲಸಕ್ಕೂ ಪಶ್ಚಾತ್ತಾಪ ಪಡಬೇಕಿಲ್ಲ ಎಂಬುದೇ ಆತನ ವಾದವಾಗಿತ್ತು. ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷಿಯಾ, ರಷ್ಯಾ ಇಲ್ಲಿನ ಆರ್ಥಿಕತೆ ಕುಸಿಯಲು ಕಾರಣವಾಗಿದ್ದಕ್ಕೆ ನಿಮಗೆ ಬೇಸರವಿದೆಯೇ? ಎಂದು ಪತ್ರಕರ್ತ ಕೇಳಿದರೆ, 'ನಾನು ಲಾಭ ಗಳಿಸಲೆಂದೇ ವ್ಯಾಪಾರ ಮಾಡುತ್ತೇನೆ. ಈ ವಿಚಾರ ಬಂದಾಗ ಅದನ್ನು ಬಿಟ್ಟು ಬೇರೆ ಯೋಚಿಸುವುದಿಲ್ಲ. ಈ ಹಂತದಲ್ಲಿ ನಡೆಯುವ ಯಾವುದೇ ಸಾಮಾಜಿಕ ಅವಘಡಗಳಿಗೂ ನಾನು ಜವಾಬ್ದಾರನಲ್ಲ. ಆದರೆ ಮಾನವೀಯತೆ ವಿಚಾರ ಬಂದಾಗ ನಾನು ಬೇರೆ ರೀತಿ ಯೋಚಿಸುತ್ತೇನಷ್ಟೆ' ಎನ್ನುತ್ತಾನೆ. ಒಂದೆಡೆ ಸಾವಿರಾರು ಮಂದಿಯ ಸಾವಿಗೆ ಕಾರಣನಾಗಿ ಮತ್ತೊಂದೆಡೆ ಈ ಲಾಭದ ಒಂದಷ್ಟು ಹಣವನ್ನು ಸತ್ತವರ ಮಕ್ಕಳ ಅಧ್ಯಯನಕ್ಕೆಂದು ಮೀಸಲಾಗಿಟ್ಟುಬಿಟ್ಟರೆ ಆದೀತೇನು?

ಸೊರೊಸ್ ಕೆಲಸ ಮಾಡುವ ಸ್ವರೂಪ ಹೇಗೆ ಗೊತ್ತೇ? ಆತ 1984ರಲ್ಲಿ ಓಪನ್ ಸೊಸೈಟಿ ಫೌಂಡೇಶನ್ ಎಂಬ ದತ್ತಿ ಸಂಸ್ಥೆಯನ್ನು ಆರಂಭಿಸಿದ. ಆತನ ವೆಬ್​ಸೈಟನ್ನು ನಂಬುವುದಾದರೆ ಇದುವರೆಗೂ 32 ಬಿಲಿಯನ್ ಡಾಲರ್​ಗಳಷ್ಟು ಸ್ವಂತ ಹಣವನ್ನು ಅದಕ್ಕಾಗಿ ನೀಡಿದ್ದಾನೆ. ಈ ಫೌಂಡೇಶನ್ ಜಗತ್ತಿನಾದ್ಯಂತ ಅನೇಕ ಸ್ವಯಂ ಸೇವಾ ಸಂಸ್ಥೆಗಳಿಗೆ ದಾನ ನೀಡುತ್ತದೆ. ಆ ಮೂಲಕ ಆಯಾ ರಾಷ್ಟ್ರಗಳಲ್ಲಿ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುತ್ತದೆ. ಈ ಸ್ವಯಂ ಸೇವಾ ಸಂಸ್ಥೆಗಳು ಬಹುಪಾಲು ಎಡಪಂಥೀಯ ಚಿಂತಕರದ್ದೇ ಆಗಿದ್ದು ದೇಶ ವಿಭಜಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವಂಥವು. ಸ್ವತಃ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗರ ಮಗಳು ಅಮೃತಾ ಸಿಂಗ್ ಈ ಸಂಸ್ಥೆಯ ನಿರ್ದೇಶಕಿಯಾಗಿ ದುಡಿದಿದ್ದವಳು. ಪ್ರಧಾನಮಂತ್ರಿಯೊಬ್ಬರ ಮಗಳು ಇಂತಹ ಸಂಸ್ಥೆಯೊಂದರಲ್ಲಿ ಇದ್ದಾಳೆ ಎಂದರೆ ಸರ್ಕಾರದ ಮೇಲೆ ಸೊರೊಸ್ ಹೊಂದಿದ್ದ ಪ್ರಭಾವ ಎಂಥದ್ದಿರಬಹುದು ಎಂದು ಯೋಚಿಸಿ! ಇಷ್ಟೇ ಅಲ್ಲ, ಸೋನಿಯಾ ಆಪ್ತನಾಗಿದ್ದ ಹರ್ಷ್ ಮಂದಾರ್ ಕೂಡ ಈತನೊಡನೆ ಕೆಲಸ ಮಾಡುತ್ತಿರುವವನೇ. ಹರ್ಷ್ ಮಂದಾರ್ ಸಾಮಾನ್ಯವಾದ ವ್ಯಕ್ತಿಯಲ್ಲ. ಆತ ಐಎಎಸ್ ಅಧಿಕಾರಿಯಾಗಿದ್ದು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ, 2002ರಲ್ಲಿ ನಡೆದ ಗುಜರಾತ್ ದಂಗೆಯ ನೆಪಹೇಳಿ ರಾಜಿನಾಮೆ ಕೊಟ್ಟು, ತನ್ನದ್ದೇ ಆದ ಸಾಮಾಜಿಕ ಸೇವಾ ಸಂಘಟನೆಗಳ ಮೂಲಕ ಆರಾಮದಾಯಕ ಬದುಕನ್ನು ಅನುಭವಿಸುತ್ತಿದ್ದಾನೆ. ಈತನ ಸರ್ಕಾರೇತರ ಸಂಸ್ಥೆಗಳಿಗೆ ಸೊರೊಸ್ ಉದಾರವಾಗಿ ಹಣ ನೀಡುತ್ತಾನೆ. ನಿಮಗೆ ಗಾಬರಿಯಾಗುವ ಸಂಗತಿ ಹೇಳಲೇ? ಆತ ಸೋನಿಯಾ ಯುಪಿಎ ಸರ್ಕಾರದ ಸಂದರ್ಭದಲ್ಲಿ ರೂಪಿಸಿಕೊಂಡಿದ್ದ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯನೂ ಆಗಿದ್ದ. ಆ ಹೊತ್ತಿನಲ್ಲೇ ಬಂದ ಹಿಂದೂವಿರೋಧಿ ಕಮ್ಯುನಲ್ ವೈಯಲೆನ್ಸ್ ಬಿಲ್ ಈತನೇ ತಯಾರಿಸಿದ್ದು. ಆಕ್ಷನ್ ಏಡ್ ಇಂಡಿಯಾ ಎಂಬ ಸಂಸ್ಥೆಯ ರಾಷ್ಟ್ರೀಯ ಮುಖ್ಯಸ್ಥನಾಗಿರುವ ಈತ ತನ್ನ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್​ಗೆ ಕೋಟ್ಯಂತರ ರೂಪಾಯಿ ಹಣವನ್ನು ವಿದೇಶಗಳಿಂದ ಪಡೆದುಕೊಂಡಿದ್ದಾನೆ. ಎನ್​ಕೌಂಟರ್​ಗೆ ಒಳಗಾದ ಇಶ್ರತ್ ಜಹಾನ್​ಳಿರಲಿ, ಮುಂಬೈ ದಾಳಿಗೆ ಕಾರಣನಾದ ಯಾಕುಬ್ ಮೆಮನ್ ಇರಲಿ, ಕೊನೆಗೆ ಅಜ್ಮಲ್ ಕಸಬ್, ಅಫ್ಜಲ್ ಗುರುಗಳಾದರೂ ಸರಿ ಅವರೆಲ್ಲರ ಪರವಾಗಿ ದನಿ ಎತ್ತುವವರಲ್ಲಿ ಹರ್ಷ್ ಇದ್ದೇ ಇರುತ್ತಾನೆ. ಅಯೋಧ್ಯೆಯಲ್ಲಿ ರಾಮ ಮಂದಿರವಾಗಬೇಕೆಂಬ ಆದೇಶ ಬಂದಾಗ ಅದನ್ನು ಪರಿಶೀಲಿಸಬೇಕೆಂದು ನ್ಯಾಯಾಲಯಕ್ಕೆ ಹೋದ 40 ಮಂದಿಯಲ್ಲಿ ಈತನೂ ಇದ್ದ. ಸಿಎಎ ವಿರುದ್ಧ ದೆಹಲಿಯ ಶಾಹಿನ್​ಬಾಗ್​ನಲ್ಲಿ ಪ್ರತಿಭಟನೆಗೆ ಕೂತಿದ್ದರಲ್ಲ, ಆಗ ತನ್ನ ಕಾರ್​ವಾನ್-ಎ-ಮೊಹಬ್ಬತ್ ಎಂಬ ಸಂಘಟನೆಯ ಮೂಲಕ ಪ್ರತಿಭಟನೆಯ ಸೂತ್ರದಾರ ಶರ್ಜಿಲ್ ಇಮಾಮ್​ಗೆ ಬೆಂಬಲ ಸೂಚಿಸಿದ್ದಲ್ಲದೆ, 'ಈಗ ನಿರ್ಣಯ ಸಂಸತ್ತಿನಲ್ಲೋ, ನ್ಯಾಯಾಲಯದಲ್ಲೋ ಆಗದು. ಅಯೋಧ್ಯೆ ಮತ್ತು ಕಾಶ್ಮೀರಗಳ ವಿಚಾರದಲ್ಲಿ ಸವೋಚ್ಚ ನ್ಯಾಯಾಲಯ ಜಾತ್ಯತೀತತೆಯನ್ನು ರಕ್ಷಿಸಲಿಲ್ಲ. ಹೀಗಾಗಿಯೇ ಕದನ ಬೀದಿಯಲ್ಲೇ ನಡೆದುಬಿಡಲಿ' ಎಂದಿದ್ದ.

ಇಷ್ಟಕ್ಕೇ ಮುಗಿಯಲಿಲ್ಲ ಕರ್ನಾಟಕದ ಹರ್ತಿಕೋಟೆಯ ಸಲಿಲ್ ಶೆಟ್ಟಿ ಭಾರತ್ ಜೊಡೊ ಯಾತ್ರೆಯಲ್ಲಿ ರಾಹುಲ್ ಕೈ ಕೈ ಹಿಡಿದು ನಡೆದಿದ್ದ. ಆತ ಸೊರೊಸ್​ನ ಓಪನ್ ಸೊಸೈಟಿ ಫೌಂಡೇಶನ್ ಜಾಗತಿಕ ಉಪಾಧ್ಯಕ್ಷ. ಆತನೇ ಈ ಹಿಂದೆ ಆಮ್ನೆಸ್ಟಿ ಇಂಟರ್​ನ್ಯಾಷನಲ್​ನ ಕಾರ್ಯದರ್ಶಿಯೂ ಆಗಿದ್ದ. ಅಂದಹಾಗೆ ಇದೇ ಸಂಸ್ಥೆ ಭಾರತ ಮಾನವ ಹಕ್ಕುಗಳ ವಿಚಾರದಲ್ಲಿ ಕಳಪೆಯಾಗಿ ವರ್ತಿಸುತ್ತಿದೆ ಎಂಬ ವರದಿ ಕೊಟ್ಟಿತ್ತು. ಈಗ ಆ ವರದಿಯ ಮಹತ್ವ ಅರಿವಾಗುತ್ತಿದ್ದಿರಬಹುದಲ್ಲವೇ?

ಸೊರೊಸ್ ತನ್ನ ತಂಡದ ಮೂಲಕ ಅನೇಕ ಮಾಧ್ಯಮಗಳಿಗೂ ಹಣ ನೀಡುತ್ತಾನೆ. ಆ ಮೂಲಕ ಅಭಿಪ್ರಾಯವನ್ನೇ ಕೊಂಡುಕೊಳ್ಳುತ್ತಾನೆ. ಅನೇಕ ರಾಷ್ಟ್ರಗಳಲ್ಲಿ ತನಗೆ ಬೇಕಾದ, ತಾನು ಹೇಳಿದಂತೆ ಕೇಳುವ ಪಕ್ಷಗಳನ್ನು ಅಧಿಕಾರಕ್ಕೆ ತರಲು ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾನೆ. ಹಂಗೇರಿಯಂತಹ ಅನೇಕ ರಾಷ್ಟ್ರಗಳು ಆತನ ಹೂಡಿಕೆಯನ್ನು ವಿರೋಧಿಸುವುದು ಈ ಕಾರಣಕ್ಕಾಗಿಯೇ.

ಈಗ ಎಲ್ಲವನ್ನೂ ಮತ್ತೊಮ್ಮೆ ಅವಲೋಕಿಸಿ ನೋಡಿ. ಸ್ವತಃ ಕ್ರಿಮಿನಲ್​ಗಳ ಸಾಲಿಗೆ ಸೇರುವ ಸೊರೊಸ್ ಭಾರತದಲ್ಲಿ ಅನೇಕ ಸೇವಾ ಸಂಸ್ಥೆಗಳ ಮೂಲಕ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಾನೆ. ಮಾಧ್ಯಮಗಳನ್ನು ಹಿಡಿತದಲ್ಲಿರಿಸಿಕೊಳ್ಳುವ ಮೂಲಕ ಜನಾಭಿಪ್ರಾಯ ರೂಪಿಸುತ್ತಾನೆ. ಜಾಗತಿಕ ವರದಿಗಳು ಭಾರತದ ವಿರುದ್ಧ ಇರುವಂತೆ ನೋಡಿಕೊಳ್ಳುತ್ತಾನೆ. ಅಜೀಂ ಪ್ರೇಮ್ ಥರದವರ ಮೂಲಕ ಇಲ್ಲಿ ಜನಮೆಚ್ಚುಗೆಯ ಕಾರ್ಯ ನಡೆಸುವಂತೆ ಮಾಡಿ ಪಿತೂರಿ ಮಾಡುತ್ತಾನೆ. ಕೊನೆಗೆ ಇವೆಲ್ಲದರ ಲಾಭ ಪಡೆಯಲು ಕಾಂಗ್ರೆಸ್ ನಾಯಕರ ಯಾತ್ರೆಗಳಿಗೆ ಹಣ ಕೊಡುತ್ತಾನೆ, ತನ್ನವರನ್ನೂ ಕಳಿಸುತ್ತಾನೆ. ವಿದೇಶದಲ್ಲಿ ಕೂತು ಭಾರತವನ್ನು ಚೂರು ಮಾಡುವ ಈ ಕಲ್ಪನೆ ಬ್ರಿಟಿಷರು ಭಾರತವನ್ನಾಳಿದಂತಲ್ಲವೇನು?

ಆಕ್ರಮಣಕಾರಿಗಳನ್ನು ತುಂಡು ಬಟ್ಟೆ ಧರಿಸಿ ಮಹಾತ್ಮ ಓಡಿಸಿದರೆ, ಆತನ ಹೆಸರಿಟ್ಟುಕೊಂಡು ಬೇರೊಂದು ರೂಪದಲ್ಲಿ ಅವರನ್ನೇ ಕರೆತರಲು ಯತ್ನಿಸುವುದು ಎಷ್ಟು ಸರಿ? ಮೊದಿಯನ್ನು ವಿರೋಧಿಸಿ; ಅಭ್ಯಂತರವಿಲ್ಲ. ಆದರೆ, ಆ ಧಾವಂತದಲ್ಲಿ ಭಾರತವನ್ನೇ ಪ್ರಪಾತಕ್ಕೆ ತಳ್ಳಬೇಡಿ.

ಇದು ನನ್ನ ಕಳಕಳಿಯ ಕೋರಿಕೆ ಅಷ್ಟೆ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)