ಧಾರವಾಡ ರಂಗಾಯಣದಿಂದ ಡಿ.24, 25ರಂದು ವೀರರಾಣಿ ಕಿತ್ತೂರು ಚನ್ನಮ್ಮ ನಾಟಕದ ಮೆಗಾ ಪ್ರದರ್ಶನ

ಇದೇ ಪ್ರಥಮ ಬಾರಿಗೆ ಧಾರವಾಡ ರಂಗಾಯಣದಿಂದ, ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಜೀವನಾಧಾರಿತ ಮೆಗಾ ನಾಟಕವನ್ನು ಪ್ರದರ್ಶನಕ್ಕೆ ಸಿದ್ಧಗೊಳಿಸಲಾಗಿದೆ ಎಂದು ಧಾರವಾಡ ರಂಗಾಯಣ ನಿರ್ದೇಶಕ ರಮೇಶ್ ಪರವಿನಾಯ್ಕರ್ ಹೇಳಿದ್ದಾರೆ.ಧಾರವಾಡದಲ್ಲಿ ಈ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾಟಕದ ಪ್ರಥಮ ಪ್ರದರ್ಶನಕ್ಕೆ ಕೆಸಿಡಿ ಆವರಣದಲ್ಲಿ ಡಿ.24ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಸರ್ಕಾರದ ಅನೇಕ ಸಚಿವರು, ಉತ್ತರ ಕರ್ನಾಟಕದ ಶಾಸಕರು, ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.ಸ್ವಾತಂತ್ರ್ಯ ಸಮರದ ಬೆಳ್ಳಿ ಚುಕ್ಕಿ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಜೀವನಾಧಾರಿತ ನಾಟಕ ಪ್ರಸ್ತುತಪಡಿಸುವಲ್ಲಿ, ಅನೇಕ ಸಂಶೋಧಕರು ಹಾಗೂ ವಿದ್ವಾಂಸರ ಸಲಹೆ, ಮಾರ್ಗದರ್ಶನ ಪಡೆಯಲಾಗಿದೆ. ಅವರ ವಿಮರ್ಶೆಯಿಂದ ಬಂದ ಅಂಶಗಳನ್ನು ನಾಟಕದಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದ ರಮೇಶ್ ಪರವಿನಾಯ್ಕರ್, ಬೃಹತ್ ವೇದಿಕೆಯಲ್ಲಿ ಜೀವಂತ ಆನೆ, ಕುದುರೆ, ನೂರಾರು ಜನ ಕಲಾವಿದರನ್ನು ಸಂಯೋಜಿಸಿ, ನಾಟಕವನ್ನು ವಿಭಿನ್ನವಾಗಿ ಪ್ರದರ್ಶನ ಮಾಡಲಾಗುತ್ತದೆ ಎಂದು ತಿಳಿಸಿದರು.ಉತ್ತರ ಕರ್ನಾಟಕದ ಸ್ವಾತಂತ್ರ್ಯ ಸೇನಾನಿಗಳನ್ನು ನೆನಪಿಸುವ ಈ ಮೆಗಾ ನಾಟಕ, ವೀರ ರಾಣಿ ಕಿತ್ತೂರು ಚೆನ್ನಮ್ಮ ಅವರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ, ಗೌರವಿಸುವ ದ್ಯೋತಕವಾಗಿದೆ ಎಂದು ರಮೇಶ್ ಪರವಿನಾಯ್ಕರ್ ಹೇಳಿದರು.