ದಶಕಗಳ ಕನಸು ನನಸು: ನಾಳೆ ಶಿವಮೊಗ್ಗ ಏರ್‌ಪೋರ್ಟ್‌ ಲೋಕಾರ್ಪಣೆ.. ವಿಶೇಷತೆ ಏನು?

ದಶಕಗಳ ಕನಸು ನನಸು: ನಾಳೆ ಶಿವಮೊಗ್ಗ ಏರ್‌ಪೋರ್ಟ್‌ ಲೋಕಾರ್ಪಣೆ.. ವಿಶೇಷತೆ ಏನು?

ರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣವಾಗಿ ಶಿವಮೊಗ್ಗ ಏರ್‌ಪೋರ್ಟ್‌ ಸೇರ್ಪಡೆಯಾಗುತ್ತಿದೆ. ಅಂತೂ ಮಲೆನಾಡಿನ ಜನರ ದಶಕಗಳ ಕನಸು ನನಸಾಗುತ್ತಿದೆ. ಸೋಗಾನೆಯಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು, ನಾಳೆ (ಫೆ. 27) ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಜೊತೆಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ.

ಶಿವಮೊಗ್ಗದ ನೂತನ ಏರ್‌ಪೋರ್ಟ್‌ನ್ನು ರೂ.450 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗಂಟೆಗೆ ಸುಮಾರು 300 ಪ್ರಯಾಣಿಕರನ್ನು ಅಲ್ಲಿನ ಸಿಬ್ಬಂದಿ ನಿಭಾಯಿಸುವಷ್ಟು ವಿಮಾನ ನಿಲ್ದಾಣದ ಪ್ಯಾಸೆಂಜರ್ ರ್ಟರ್ಮಿನಲ್ ಕಟ್ಟಡವು ಸುಸಜ್ಜಿತವಾಗಿದೆ. ಈ ವಿಮಾನ ನಿಲ್ದಾಣವು ಶಿವಮೊಗ್ಗ, ಮಲೆನಾಡಿನ ಇತರೆ ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಅಲ್ಲದೆ, ಪ್ರಧಾನಿ ಮೋದಿ ಅವರು, ರೂ.990 ಕೋಟಿ ವೆಚ್ಚದಲ್ಲಿ ಹೊಸ ರೈಲು ಮಾರ್ಗಗಳ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಲಿದ್ದಾರೆ. ಈ ಮೂಲಕ ಬೆಂಗಳೂರು-ಮುಂಬೈಗೆ ಸಂಪರ್ಕಿಸಲಾಗುತ್ತದೆ.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ವಿಮಾನ ನಿಲ್ದಾಣದ ಕಾಮಗಾರಿಯು ಮತ್ತಷ್ಟು ವೇಗವನ್ನು ಪಡೆದುಕೊಂಡಿತ್ತು. ಮೊದಲಿಗೆ ಕೇವಲ 2050 ಮೀಟರ್ ರನ್ ವೇ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ದೊಡ್ಡ ಗಾತ್ರದ ವಿಮಾನವನ್ನು ಇಳಿಸಲು ಅನುಕೂಲವಾಗುವಂತೆ ರನ್ ವೇ ಉದ್ದವನ್ನು 3200 ಮೀಟರ್ ಗೆ ಹೆಚ್ಚಿಸಲು ಬಳಿಕ ತೀರ್ಮಾನಿಸಲಾಯಿತು. ಈ ವಿಮಾನ ನಿಲ್ದಾಣವನ್ನು ಶಿವಮೊಗ್ಗದ ಸುತ್ತಲಿನ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜನರು ಬಳಕೆ ಮಾಡಬಹುದು.

ಶಿವಮೊಗ್ಗ ವಿಮಾನ ನಿಲ್ದಾಣವು ಎರಡನೇ ಅತಿದೊಡ್ಡ ರನ್ ವೇ ಹೊಂದಿರುವ ವಿಮಾನ ರಾಜ್ಯದ ಎರಡನೇ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಫೆ.21ರಂದು ಭಾರತೀಯ ವಾಯುಪಡೆಯ 180 ಪ್ರಯಾಣಿಕರ ಸಾಮರ್ಥ್ಯದ ವಿಮಾನವು ಯಶಸ್ವಿಯಾಗಿ ಪರೀಕ್ಷಾರ್ಥ ಸಂಚಾರ ನಡೆಸಿದೆ. ಅಂದು ಬೆಳಗ್ಗೆ 11.45ಕ್ಕೆ ನವದೆಹಲಿಯಿಂದ ಹೊರಟ ಈ ವಿಮಾನ ಮಧ್ಯಾಹ್ನ 2.15ಕ್ಕೆ ಶಿವಮೊಗ್ಗ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು. ಮಧ್ಯಾಹ್ನ 3ಕ್ಕೆ ಇಲ್ಲಿಂದ ಹೊರಟು ಸಂಜೆ 5.15 ಗಂಟೆಗೆ ನವದೆಹಲಿದೆಹಲಿಗೆ ತಲುಪಿತ್ತು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಉಡಾನ್ ಯೋಜನೆ ಅಡಿ ಸೋಗಾನೆ ಗ್ರಾಮದ 662.38 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ವಿಮಾನ ನಿಲ್ದಾಣವು ಶಿವಮೊಗ್ಗ ನಗರದಿಂದ 8.8 ಕಿಲೋಮೀಟರ್ ದೂರವಿದ್ದು, ಭದ್ರಾವತಿಯಿಂದ ಸುಮಾರು 8.2 ಕಿಲೋಮೀಟರ್ ಅಂತರದಲ್ಲಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಅತಿ ಉದ್ದದ ರನ್ ವೇ ಹೊಂದಿರುವ ಈ ವಿಮಾನ ನಿಲ್ದಾಣದಲ್ಲಿ ಬೋಯಿಂಗ್ 737 ಮತ್ತು ಏರ್‌ಬಸ್ A320 ವಿಮಾನಗಳನ್ನು ಸುಲಭವಾಗಿ ಇಳಿಸಬಹುದು.

ಶಿವಮೊಗ್ಗ ಸಂಸದ ಬಿ. ವೈ.ರಾಘವೇಂದ್ರ ಡ್ರೋನ್ ಕ್ಯಾಮೆರಾದಲ್ಲಿ ಚಿತ್ರಿಸಲಾದ ಏರ್‌ಪೋರ್ಟ್‌ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ರೀ-ಟ್ವೀಟ್ ಮಾಡಿ, ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ಆರ್ಥಿಕ ಹಾಗೂ ಸಂಪರ್ಕ ಪ್ರಗತಿ, ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಬರೆದುಕೊಂಡಿದ್ದರು. ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕರ್ನಾಟಕದ ಜನರೇ, ದೇಶದ 148ನೇ ವಿಮಾನ ನಿಲ್ದಾಣವಾಗಿ ಶಿವಮೊಗ್ಗ ಏರ್‌ಪೋರ್ಟ್‌ ಸೇರ್ಪಡೆಯಾಗುತ್ತಿದೆ ಎಂದು ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದರು.

ಇನ್ನು, ಮಲೆನಾಡಿನ ಜನರ ಕನಸು ಅಂತಿಮವಾಗಿ ನಾಳೆ ಈಡೇರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು, ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ಈ ಏರ್‌ಪೋರ್ಟ್‌ ಮೂಲಕ ಶಿವಮೊಗ್ಗ ಸುತ್ತಲಿನ ಜಿಲ್ಲೆಗಳಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದ್ದು, ಹೊಸ ಉದ್ಯಮಗಳು ತಲೆ ಎತ್ತುವ ಮೂಲಕ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿದೆ. ಜೊತೆಗೆ ಬೆಂಗಳೂರು ಹಾಗೂ ಶಿವಮೊಗ್ಗದ ಪ್ರಯಾಣದ ಅವಧಿಯು ಕಡಿಮೆಯಾಗಲಿದೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.