ದರ್ಶನ್ ಫ್ಯಾನ್ ಫಾಲೋಯಿಂಗ್ ನೋಡಿ ಬೆರಗಾದ ಆರ್‌ಜೆ ಮಯೂರ ರಾಘವೇಂದ್ರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಳಗ ಎಷ್ಟು ದೊಡ್ಡ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಬರುತ್ತಿದೆ. ಇತ್ತೀಚಿಗೆ ಆರ್‌ಜೆ ಮಯೂರ ರಾಘವೇಂದ್ರ ಅವರ ಯೂಟ್ಯೂಬ್ ಚಾನಲ್‌ಗೆ ನಟ ದರ್ಶನ್ ಸಂದರ್ಶನ ಕೊಟ್ಟಿದ್ದರು. ಆ ಎಪಿಸೋಡ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಆರ್‌ಜೆ ಮಯೂರ ರಾಘವೇಂದ್ರ ರಾಘ ರಾಘಂ ಸ್ಟೋರಿ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಗೋಲ್ಡ್ ಕ್ಲಾಸ್ ಹೆಸರಿನಲ್ಲಿ ಸಂದರ್ಶನ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. 'ಕ್ರಾಂತಿ' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ನಟ ದರ್ಶನ ಅತಿಥಿಯಾಗಿ ವಿಶೇಷ ಸಂದರ್ಶನ ಮಾಡಿದ್ದರು. ಅದಕ್ಕೆ ನಟಿ ರಚಿತಾ ರಾಮ್ ಸಾಥ್ ಕೂಡ ಸಿಕ್ಕಿತ್ತು. ಸಂದರ್ಶನದಲ್ಲಿ ನಟ ದರ್ಶನ್ 'ಕ್ರಾಂತಿ' ಸಿನಿಮಾ ಸೇರಿದಂತೆ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಜೀವನದ ಏಳುಬೀಳಿನ ಬಗ್ಗೆ ಮಾತನಾಡಿದ್ದರು. ಎಪಿಸೋಡ್‌ಗೂ ಮುನ್ನ ಬಂದಿದ್ದ ಪ್ರೋಮೊ ವೈರಲ್ ಆಗಿತ್ತು. ಹಾಗಾಗಿ ಅಭಿಮಾನಿಗಳು ಕಂಪ್ಲೀಟ್ ಎಪಿಸೋಡ್‌ಗಾಗಿ ಕಾದು ಕೂತಿದ್ದರು.
ವಿಶೇಷ ಸಂದರ್ಶನಕ್ಕೆ ಸಿಕ್ಕಿದ ಪ್ರತಿಕ್ರಿಯೆ ಬಗ್ಗೆ ಮಯೂರ ರಾಘವೇಂದ್ರ, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. "ನಿನ್ನೆ ಸಂಜೆಯಿಂದ ನನ್ನ ಫೋನ್ ಹಾಗೂ ಇನ್ಸಾಗ್ರಾಮ್ ಅಲ್ಲಿ ಹರಿದು ಬರುತ್ತಿರುವ ಮೆಸೇಜ್‌ನಿಂದ ತಿಳಿದು ಬಂತು ಈ ವ್ಯಕ್ತಿಗೆ ಇರುವ ಅಭಿಮಾನಿಗಳ ಸಂಖ್ಯೆ. ಇಂದಿನ ದಿನಗಳಲ್ಲಿ ನಟರು, ಸಂದರ್ಶನ ಮಾಡುವವರ ಯೂಟ್ಯೂಬ್ ಅಲ್ಲಿ ಎಷ್ಟು ಜನ ಫಾಲೋವರ್ಸ್ ಇದ್ದಾರೆ ಎಂದು ನೋಡೋ ಕಾಲದಲ್ಲಿ, ಈ ಚಿನ್ನದಂತ ಮನುಷ್ಯ ಇದೆಲ್ಲ ಲೆಕ್ಕಿಸದೆ ಸಂದರ್ಶನ ಕೊಟ್ಟು ಹಾಗೂ ಎಲ್ಲ ರೀತಿಯ ಸಹಕಾರ ನೀಡಿದರು."
"ನನ್ನ ವೈಯಕ್ತಿಕ ಅನುಭವದಲ್ಲಿ ಕಳೆದ ಒಂದಷ್ಟು ವರ್ಷಗಳಿಂದ ಸಂದರ್ಶನ ಮಾಡುತ್ತಿರುವೆ. ಇದರಲ್ಲಿ ನಮ್ಮನ್ನು ತಿರಸ್ಕರಿಸಿದವರ ಜೊತೆಗೆ ನಮ್ಮನ್ನು ತುಂಬು ಹೃದಯದಿಂದ ಸ್ವಾಗತ ಮಾಡಿದವರನ್ನು
ನೋಡಿದ್ದೇನೆ . ನಿನ್ನೆಯ ವಿಡಿಯೋ ಬಿಡುಗಡೆಯಾದ ನಂತರ ಕೇವಲ ಒಂದು ದಿನದಲ್ಲಿ ಮೂರುವರೆ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇದರಿಂದಲೇ ತಿಳಿಸುತ್ತೆ ಜನರು ದರ್ಶನ್ ಅವರ ಮೇಲೆ ಇಟ್ಟಿರುವ ಪ್ರೀತಿ. ಇದಕ್ಕಿಂತ ಇನ್ನೇನು ಬೇಕು. ಜನರ ಪ್ರೀತಿ ಹಾಗು ಗೌರವ ಇಷ್ಟು ವರ್ಷದ ಪರಿಶ್ರಮದಲ್ಲಿ ಈ ವ್ಯಕ್ತಿಯ ಗಳಿಕೆ, ಧನ್ಯವಾದಗಳು ದರ್ಶನ್ ಸರ್"
"ಇದರ ಜೊತೆಗೆ ಇನ್ನೊಬ್ಬರು ಈ ಯಶಸ್ಸಿಗೆ ಕಾರಣ. ನನ್ನ ಮೆಚ್ಚಿನ ಸ್ನೇಹಿತೆ ರಚಿತಾ ರಾಮ್. ಈ ಯೋಚನೆಯನ್ನು ಅವರೊಂದಿಗೆ ಹಂಚಿಕೊಂಡಾಗ, ಅವರೇ ನಂಗೆ ಪ್ರೋತ್ಸಾಹ ಕೊಟ್ಟು, ಈ ಶೋಗೆ ಬೆಂಬಲವಾಗಿ ನಿಂತರು. ರಿಷಭಪ್ರಿಯ ನಂತರ ನಾವು ಇಷ್ಟೊಂದು ಮಟ್ಟಿಗೆ ಯಶಸ್ಸು ಕಂಡಿರುವುದು ನಮಗಿಬ್ಬರಿಗೂ ಇನ್ನಷ್ಟು ಒಟ್ಟಾಗಿ ಕೆಲಸ ಮಾಡುವ ನಂಬಿಕೆ ಹಾಗು ಹುರುಷ ತುಂಬಿಸಿದೆ" ಎಂದಿದ್ದಾರೆ.