ತಂದೆ-ಮಗ, ಪತಿ-ಪತ್ನಿ ಸಚಿವರಾಗಿದ್ದರು

ತಂದೆ-ಮಗ, ಪತಿ-ಪತ್ನಿ ಸಚಿವರಾಗಿದ್ದರು

ವಿಜಯಪುರ: ಜಿಲ್ಲೆಯಲ್ಲಿ ರಾಜಕೀಯ ಪ್ರಭಾವಿ ಹಾಗೂ ಪ್ರತಿಷ್ಠೆ ಹೊಂದಿರುವ ಕೆಲವು ಕ್ಷೇತ್ರಗಳಲ್ಲಿ ಕುಟುಂಬ ರಾಜಕೀಯ ಹಾಗೂ ಅಧಿಕಾರದ ಭಾಗ್ಯ ಲಭಿಸುತ್ತಲೇ ಬಂದಿದೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರ ಈ ಹಿಂದೆ ತಿಕೋಟಾ ಕ್ಷೇತ್ರವಾಗಿತ್ತು.

ಈ ಕ್ಷೇತ್ರದಿಂದ ಎಂ.ಬಿ.ಪಾಟೀಲ ಅವರ ತಂದೆ ಬಿ.ಎಂ.ಪಾಟೀಲ 1962, 1983, 1985, 1989ರಲ್ಲಿ ಗೆದ್ದಿದ್ದರೂ ಅವರಿಗೆ ಸಚಿವರಾಗುವ ಭಾಗ್ಯ ಲಭಿಸಿರಲಿಲ್ಲ.

ಆದರೆ 1967ರಲ್ಲಿ ವೀರೇಂದ್ರ ಪಾಟೀಲ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿ ದ್ದಾಗ ವಿಜಯಪುರ ನಗರ ಕ್ಷೇತ್ರದಿಂದ ಗೆದ್ದಿದ್ದ ಬಿ.ಎಂ.ಪಾಟೀಲ ಆರೋಗ್ಯ ಸಚಿವರಾ ಗಿದ್ದರು. ಅದಾದ ಬಳಿಕ ಬಿ.ಎಂ.ಪಾಟೀಲ ಅಕಾಲಿಕ ನಿಧನದಿಂದ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸಿದ ಪುತ್ರ ಎಂ.ಬಿ.ಪಾಟೀಲ ಬಬಲೇಶ್ವರ ಕ್ಷೇತ್ರದಿಂದ 2008ರಲ್ಲಿ ವಿಧಾನಸಭೆ ಪ್ರವೇಶಿಸಿದರು. 2008 ಹಾಗೂ 2013ರಲ್ಲಿ ಸತತವಾಗಿ ಗೆದ್ದಿದ್ದ ಅವರು ಸಿದ್ದರಾಮಯ್ಯ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.

ಇದಾದ ಬಳಿಕ 2018ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರದಲ್ಲಿ ಗೃಹ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರ ಪತನದ ಬಳಿಕ ಎಂ.ಬಿ.ಪಾಟೀಲ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ, ರಾಜ್ಯ ರಾಜಕೀಯದಲ್ಲಿ ಪ್ರಭಾವಿ ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇದರೊಂದಿಗೆ ವಿಜಯಪುರ ನಗರ ಕ್ಷೇತ್ರವನ್ನು ಪ್ರತಿನಿಧಿ ಸಿದ್ದ ಬಿ.ಎಂ.ಪಾಟೀಲ ಹಾಗೂ ಅವರ ಮಗ ಬಬಲೇಶ್ವರ ಕ್ಷೇತ್ರವನ್ನು ಪ್ರತಿನಿಧಿ ಸುತ್ತಿರುವ ಎಂ.ಬಿ.ಪಾಟೀಲ ಸಚಿವರಾಗಿ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯಲ್ಲಿ ತಂದೆ-ಮಗ ಇಬ್ಬರೂ ಸಚಿವರಾದ ದಾಖಲೆ ನಿರ್ಮಿಸಿದ್ದಾರೆ.

ಇನ್ನು ಜನತಾ ಪರಿವಾರದ ಹಿರಿಯ ನಾಯಕರಾಗಿದ್ದ ಜಿ.ಎಸ್‌.ದೇಶಮುಖ ಜೆಡಿಎಸ್‌ನಿಂದ ಮುದ್ದೇಬಿಹಾಳ ಕ್ಷೇತ್ರದಲ್ಲಿ 1978, 1983 ಹಾಗೂ 1985ರಲ್ಲಿ ಸತತ ಮೂರು ಬಾರಿ ಗೆಲುವು ಸಾಧಿ ಸಿದ್ದರು. ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಸಚಿವರಾಗಿದ್ದರು.

ಜಿ.ಎಸ್‌.ದೇಶಮುಖ ನಿಧನದ ಬಳಿಕ ರಾಜಕೀಯ ಪ್ರವೇಶಿಸಿದ ಅವರ ಪತ್ನಿ ವಿಮಲಾಬಾಯಿ ದೇಶಮುಖ 1994ರಲ್ಲಿ ಶಾಕರಾಗಿ ಆಯ್ಕೆಯಾಗಿ, ಜನತಾದಳ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಪತಿ-ಪತ್ನಿ ಇಬ್ಬರೂ ಸಚಿವರಾಗಿದ್ದ ಹಿರಿಮೆ ದೇಶಮುಖ ದಂಪತಿ ಮೂಲಕ ದಾಖಲಾಗಿದೆ.