ಜೆಡಿಎಸ್ ಬಿಡಲು ಸಜ್ಜಾದ ನರಸೇಗೌಡ

ಜೆಡಿಎಸ್ ಬಿಡಲು ಸಜ್ಜಾದ ನರಸೇಗೌಡ

ತುಮಕೂರು: ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟಿ ಬೆಳೆಸಿದ ಪ್ರಮುಖ ನಾಯಕರಲ್ಲಿ ಒಬ್ಬರಾದ ನರಸೇಗೌಡ ಅವರು ಪಕ್ಷ ತೊರೆಯಲು ಸಜ್ಜಾಗಿದ್ದಾರೆ. ಅವರು ಪಕ್ಷ ಬಿಟ್ಟರೆ ನಗರ ಹಾಗೂ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಿನ್ನಡೆ ಅನುಭವಿಸಲಿದೆ ಎಂದು ಹೇಳಲಾಗುತ್ತಿದೆ.

ಫೆ. 10ರಂದು ನರಸೇಗೌಡ ಹುಟ್ಟುಹಬ್ಬವಿದ್ದು, ಅಂದು ಮುಂದಿನ ನಡೆಯನ್ನು ಪ್ರಕಟಿಸಲಿದ್ದಾರೆ. ತುಮಕೂರು ನಗರ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಅಂದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ನಗರ ಘಟಕದ ಅಧ್ಯಕ್ಷರಾಗಿ 7 ವರ್ಷಗಳ ಕಾಲ ಕೆಲಸ ಮಾಡಿದ್ದು, ಸುಮಾರು 20 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರಿಗೆ ನಿಕಟವರ್ತಿಯಾಗಿದ್ದು, ದಳಪತಿಗಳ ಮಾತೇ ವೇದವಾಕ್ಯ ಎಂಬಂತೆ ಪರಿಪಾಲಿಸಿಕೊಂಡು ಬಂದಿದ್ದವರು, ಈಗ ಪಕ್ಷ ಬಿಡುವ ಹಂತಕ್ಕೆ ಬಂದು ನಿಂತಿದ್ದಾರೆ. ಸಾಕಷ್ಟು ನೋವಿನಿಂದಲೇ ಪಕ್ಷ ಬಿಡುತ್ತಿದ್ದೇನೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ತುಮಕೂರು ನಗರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದು, ಟಿಕೆಟ್ ಸಿಗದಿದ್ದಾಗ ಬೇಸರಗೊಂಡಿದ್ದರು. ಎನ್. ಗೋವಿಂದರಾಜು ಹೆಸರು ಪ್ರಕಟಿಸಿದ ನಂತರ ಸುಮ್ಮನಾಗಿದ್ದರು. ಪಂಚರತ್ನ ರಥಯಾತ್ರೆ ಸಮಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಗೌಡರ ಮನೆಗೆ ಭೇಟಿ ನೀಡಿ ಸಮಾಧಾನಪಡಿಸಿದ್ದರು. ನರಸೇಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು ಎಂದು ಗೋವಿಂದರಾಜುಗೆ ಕುಮಾರಸ್ವಾಮಿ ಸಲಹೆ ಮಾಡಿದ್ದರು. ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಲು ಮನಸ್ಸು ಮಾಡಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಂತರವೂ ನರಸೇಗೌಡ ಅವರನ್ನು ಗೋವಿಂದರಾಜು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಬದಲಾಗಿ ಗೌಡರ ವಿರುದ್ಧವೇ ಅಪಪ್ರಚಾರ ನಡೆಸಿದ್ದಾರೆ. ಇತ್ತೀಚೆಗೆ ಪಕ್ಷಕ್ಕೆ ಬಂದವರಿಗೆ ರಾಜ್ಯ ಮಟ್ಟದ ಪದಾಧಿಕಾರಿ ಸ್ಥಾನ ನೀಡಲಾಗಿದೆ. ನನಗೆ ವಿಧಾನಸಭೆಗೆ ಟಿಕೆಟ್ ಕೊಡದಿದ್ದರೂ ಪರವಾಗಿಲ್ಲ. ಕನಿಷ್ಠ ಪಕ್ಷದ ಪದಾಧಿಕಾರಿ ಹುದ್ದೆಯಲ್ಲಾದರೂ ಪ್ರಮುಖ ಸ್ಥಾನ ನೀಡಬಹುದಿತ್ತು. ನಾನೇನು ಹಣ ಕೊಡಿ ಎಂದು ಕೇಳುವುದಿಲ್ಲ. ಪಕ್ಷದಲ್ಲಿ ಸರಿಯಾಗಿ ನಡೆಸಿಕೊಳ್ಳದಿದ್ದರೂ ಹೇಗಿರುವುದು ಎಂದು ಪ್ರಶ್ನಿಸುತ್ತಾರೆ.

'ಇದೆಲ್ಲಕ್ಕಿಂತ ಪ್ರಮುಖವಾಗಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಮಯದಲ್ಲಿ ದೇವೇಗೌಡ, ಕುಮಾರಸ್ವಾಮಿ ಆರೋಗ್ಯ ವಿಚಾರಿಸಲಿಲ್ಲ. ಸತ್ತು, ಬದುಕಿ ಬಂದಿದ್ದೇನೆ. ಜೆಡಿಎಸ್, ಗೌಡರಿಗಾಗಿ ಜೀವನ ಸವೆಸಿದ್ದೇನೆ. ಮನೆ, ಮಠ, ಹಣ ಕಳೆದುಕೊಂಡಿದ್ದೇನೆ. ಕನಿಷ್ಠ ಸೌಜನ್ಯಕ್ಕೂ ಆರೋಗ್ಯ ವಿಚಾರಿಸಲಿಲ್ಲ. ಯಾರೋ ಕಾರ್ಯಕರ್ತರು ಫೋನ್ ಮಾಡಿ ಕೊಟ್ಟಾಗ ಹೇಗಿದ್ದೀರಿ ಎಂದರು? ಪಕ್ಷಕ್ಕಾಗಿ ದುಡಿದವರಿಗೆ ಬೆಲೆ ಎಲ್ಲಿದೆ?' ಎನ್ನುತ್ತಾರೆ.

'ಆಸ್ಪತ್ರೆಯಲ್ಲಿ ಇದ್ದಾಗ ಬೊಮ್ಮನಹಳ್ಳಿ ಬಾಬು (ಅಟ್ಟಿಕಾ ಬಾಬು) ಬಂದು ಆರೋಗ್ಯ ವಿಚಾರಿಸಿ, ಸಂತೈಸಿ ಸಹಾಯ ಮಾಡಿದರು. ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದಿಂದ ಟಿಕೆಟ್ ತಂದರೂ ಸಹಾಯ ಮಾಡುತ್ತೇನೆ ಎಂದು ಹೇಳಿದ್ದೇನೆ. ನೀನು ಸ್ಪರ್ಧಿಸದಿದ್ದರೆ ನಾನು ಸ್ಪರ್ಧಿಸುತ್ತೇನೆ. ಸಹಾಯ ಮಾಡು ಎಂದು ಕೇಳಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಒಂದು ನಿರ್ಧಾರಕ್ಕೆ ಬರಲಾಗುವುದು' ಎಂದು ನರಸೇಗೌಡ ತಿಳಿಸಿದರು.