ಚಿತ್ರದುರ್ಗ: ಕಾಂಗ್ರೆಸ್ ಉತ್ಸಾಹ ಕುಗ್ಗಿಸಿದ ಪಕ್ಷಾಂತರ
ಚಿತ್ರದುರ್ಗ: ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ನೇರ್ಲಗುಂಟೆ ಎಸ್. ತಿಪ್ಪೇಸ್ವಾಮಿ ಏಕಾಏಕಿ ಬಿಜೆಪಿ ಪಾಳಯ ಸೇರಿದ್ದು ಕೈ ನಾಯಕರನ್ನು ದಿಗಿಲುಗೊಳಿಸಿದೆ. ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಉಮೇದಿನಲ್ಲಿದ್ದ ಕಾಂಗ್ರೆಸ್ ಉತ್ಸಾಹವನ್ನು ಈ ಪಕ್ಷಾಂತರ ಪ್ರಕ್ರಿಯೆಯು ಕುಗ್ಗಿಸಿದೆ.
ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಕಾಂಗ್ರೆಸ್‌ನಿಂದ ಅರ್ಜಿ ಸಲ್ಲಿಸಿದ್ದ ತಿಪ್ಪೇಸ್ವಾಮಿ ಚುನಾವಣೆಯ ಹೊಸ್ತಿಲಲ್ಲಿ ಪಕ್ಷ ತ್ಯಜಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಿಲ್ಲಾ ಕಾಂಗ್ರೆಸ್ ನಾಯಕರ ಬಳಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಅವರಿಂದ ಪಕ್ಷದ ಹೈಕಮಾಂಡ್ ಮಾಹಿತಿ
ಪಡೆದಿದೆ.
ನೇರ್ಲಗುಂಟೆ ಎಸ್. ತಿಪ್ಪೇಸ್ವಾಮಿ 2013ರಿಂದ 2018ರವರೆಗೆ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಅಖಾಡಕ್ಕೆ ಇಳಿದಿದ್ದರು. ವೈಯಕ್ತಿಕ ವರ್ಚಸ್ಸಿನಿಂದ ಅವರು ಪಡೆದ 40,000ಕ್ಕೂ ಹೆಚ್ಚು ಮತಗಳು ಎರಡೂ ಪಕ್ಷದ ನಾಯಕರ ಕಣ್ಣು ಅರಳುವಂತೆ ಮಾಡಿದ್ದವು. 2019ರ ಲೋಕಸಭಾ ಚುನಾವಣೆಯಲ್ಲಿ ಸಂದರ್ಭದಲ್ಲಿ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ನೇತೃತ್ವದ ನಿಯೋಗ ತಿಪ್ಪೇಸ್ವಾಮಿ ಅವರನ್ನು ಕಾಂಗ್ರೆಸ್‌ಗೆ ಕರೆತಂದಿತ್ತು.
ಎರಡೂ ಬಣಗಳ ಪೈಪೋಟಿ: ಚುನಾವಣೆಯಲ್ಲಿ ಶ್ರೀರಾಮುಲು ಸೋಲಿಸಿ ರಾಜಕೀಯ ಸೇಡು ತೀರಿಸಿಕೊಳ್ಳುವ ಅಚಲ ನಿಲುವನ್ನು ತಿಪ್ಪೇಸ್ವಾಮಿ ಮತದಾರರ ಬಳಿ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಚಿವರ ಲೋಪಗಳನ್ನು ಹುಡುಕಿ ಜನರ ಮುಂದೆ ಇಡುವ ಪ್ರಯತ್ನ ಮಾಡಿದ್ದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀರಾಮುಲು ವಿರುದ್ಧ ಕಣಕ್ಕೆ ಇಳಿದಿದ್ದ ಬಿ. ಯೋಗೇಶ್ ಬಾಬು ಅವರು ಚುನಾವಣೆಯ ಟಿಕೆಟ್ ವಿಷಯದಲ್ಲಿ ತಿಪ್ಪೇಸ್ವಾಮಿಗೆ ಪ್ರಬಲ ಪೈಪೋಟಿ ನೀಡತೊಡಗಿದ್ದರು. ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನ, ಭಾರತ್ ಜೋಡೊ ಹಾಗೂ
ಪ್ರಜಾಧ್ವನಿ ಯಾತ್ರೆಯ ಸಂಘಟನೆಯಲ್ಲಿ ಇಬ್ಬರೂ ನಾಯಕರ ಬಣಗಳ
ನಡುವಿನ ಜಗಳ ಬಹಿರಂಗಗೊಂಡಿತ್ತು. ಭಾರತ್ ಜೋಡೊ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೇ ಇಬ್ಬರೂ ನಾಯಕರ ನಡುವೆ ಸಂಧಾನ ನಡೆಸಿ, ಒಗ್ಗಟ್ಟಿನಿಂದ ಇರುವಂತೆ ಸೂಚನೆ
ನೀಡಿದ್ದರು.
ಬಗೆಹರಿಯದ ಟಿಕೆಟ್ ಗೊಂದಲ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಬಯಸಿದ್ದ ತಿಪ್ಪೇಸ್ವಾಮಿ, ಅಖಾಡಕ್ಕೆ ಇಳಿಯುವ ಸಿದ್ಧತೆ ಮಾಡಿಕೊಂಡಿದ್ದರು. ಟಿಕೆಟ್ ಕೋರಿ ಕೆಪಿಸಿಸಿಗೆ ಅರ್ಜಿಯನ್ನೂ ಸಲ್ಲಿಸಿದ್ದರು. ಕಾಂಗ್ರೆಸ್ ಮುಖಂಡ ಯೋಗೇಶ್ ಬಾಬು, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸೇರಿ ಅನೇಕರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಟಿಕೆಟ್ ಖಚಿತವಾಗದ ಕಾರಣ ತಿಪ್ಪೇಸ್ವಾಮಿ ಗೊಂದಲಕ್ಕೆ ಸಿಲುಕಿದ್ದರು. ಈ ಅನಿಶ್ಚಿತ ಪರಿಸ್ಥಿತಿಯನ್ನು ಅವಲೋಕಿಸಿದ ಬಿಜೆಪಿ, ಸಮಯ ಕಾದು ಕಾರ್ಯಾಚರಣೆ ನಡೆಸಿತು. ಸ್ವತಃ ಶ್ರೀರಾಮುಲು ಮುನಿಸು ಬದಿಗಿಟ್ಟು ತಿಪ್ಪೇಸ್ವಾಮಿ ಬಳಿಗೆ ಧಾವಿಸಿ ಪಕ್ಷಕ್ಕೆ ಸ್ವಾಗತಿಸಿದರು.
ನಾವು ಕಾಂಗ್ರೆಸ್ ಅಧಿವೇಶನಕ್ಕೆ ತೆರಳಿದ ಸಂದರ್ಭ ನೋಡಿಕೊಂಡು ಬಿಜೆಪಿ 'ಆಪರೇಷನ್' ಮಾಡಿದೆ. ಟಿಕೆಟ್‌ಗೆ ಅರ್ಜಿ ಸಲ್ಲಿಸಿದ ತಿಪ್ಪೇಸ್ವಾಮಿ ಬಿಜೆಪಿಗೆ ಸೇರಿದ್ದು ಬೇಸರ ಮೂಡಿಸಿದೆ.
-ಎಂ.ಕೆ. ತಾಜ್‌ಪೀರ್, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ
ಚಳ್ಳಕೆರೆ ಪ್ರಭಾವಿಸುವ ಸಾಧ್ಯತೆ
ಚಳ್ಳಕೆರೆ ಮತ್ತು ಮೊಳಕಾಲ್ಮುರು ಪರಿಶಿಷ್ಟ ಪಂಗಡ (ಎಸ್.ಟಿ)ದ ಮೀಸಲು ಕ್ಷೇತ್ರಗಳು. ವಾಲ್ಮೀಕಿ ನಾಯಕ ಸಮುದಾಯ ಈ ಎರಡು ಕ್ಷೇತ್ರಗಳಲ್ಲಿ ಪ್ರಬಲವಾಗಿದೆ. ತಿಪ್ಪೇಸ್ವಾಮಿ ಅವರ ಪಕ್ಷಾಂತರ ಎರಡೂ ಕ್ಷೇತ್ರಗಳ ಮೇಲೆ ಪರಿಣಾಮ ಉಂಟು ಮಾಡಲಿದೆ.
ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ, ತಳಕು ಹೋಬಳಿ ವ್ಯಾಪ್ತಿಯಲ್ಲಿ ಚಾಚಿಕೊಂಡಿರುವ ಮೊಳಕಾಲ್ಮುರು ಕ್ಷೇತ್ರದ ರಾಜಕೀಯ ಬೆಳವಣಿಗೆ ಪಕ್ಕದ ಕ್ಷೇತ್ರವನ್ನು ಈಗಾಗಲೇ ಪ್ರಭಾವಿಸತೊಡಗಿದೆ. ತಿಪ್ಪೇಸ್ವಾಮಿ ಬಿಜೆಪಿ ಪಾಳಯ ಸೇರಿರುವುದು ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಸಂಚಲನ ಮೂಡಿಸಿದೆ.