ಖಾಸಗಿ ವಿಡಿಯೋ, ಫೋಟೋಸ್ ಇದ್ದ ಪೆನ್ಡ್ರೈವ್ ಕಳ್ಕೊಂಡು ಯುವತಿ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ!
ಬೆಂಗಳೂರು: ಹುಡುಗಿಯರೇ ಪೆನ್ಡ್ರೈವ್ನಲ್ಲಿ ಖಾಸಗಿ ವಿಡಿಯೋ ಹಾಗೂ ಫೋಟೋಸ್ ಇಟ್ಟುಕೊಳ್ಳುವ ಮುನ್ನ ನೂರು ಬಾರಿ ಯೋಚಿಸುವುದು ನಿಮಗೆ ಒಳ್ಳೆಯದು. ಇಲ್ಲವಾದಲ್ಲಿ ಎಂಥಾ ಪಜೀತಿ ಸಿಲುಕಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.
ಪೆನ್ ಡ್ರೈವ್ನಲ್ಲಿದ್ದ ಯುವತಿಯ ಖಾಸಗಿ ಪೋಟೋ ಕಳುಹಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಶೋಯೆಬ್ ಮೊಹಮ್ಮದ್ ಬಂಧಿತ ಆರೋಪಿ. ಸಂತ್ರಸ್ತ ಯುವತಿಯೊಬ್ಬಳು ತನ್ನ ಖಾಸಗಿ ಫೋಟೋಸ್ ಹಾಗೂ ವಿಡಿಯೋ ಇಟ್ಟುಕೊಂಡಿದ್ದ ಪೆನ್ ಡ್ರೈವ್ ಕಳೆದುಕೊಂಡಿದ್ದಳು. ಆ ಪೆನ್ಡ್ರೈವ್ ಆರೋಪಿ ಕೈಯಲ್ಲಿ ಸಿಕ್ಕಿಬಿದ್ದ ಬಳಿಕ ಹೇಗೋ ಯುವತಿಯ ನಂಬರ್ ಪಡೆದು, ಆಕೆಯ ವಾಟ್ಸ್ಆಯಪ್ ನಂಬರ್ಗೆ ಪೋಟೋಗಳನ್ನು ಕಳುಹಿಸಿ ಬ್ಲಾಕ್ಮೇಲ್ ಮಾಡುತ್ತಿದ್ದ.
ಸುಮಾರು 70 ಸಾವಿರ ರೂ. ಹಣಕ್ಕೆ ಆರೋಪಿ ಬೇಡಿಕೆ ಇಟ್ಟಿದ್ದ. ಹಣ ಕೊಟ್ಟರಷ್ಟೇ ಪೆನ್ಡ್ರೈವ್ ಕೊಡುವುದಾಗಿ ಬ್ಲಾಕ್ಮೇಲ್ ಮಾಡಿದ್ದ. ಆರೋಪಿಯ ಕಿರುಕುಳ ಸಹಿಸಲಾಗದೇ ಸಂತ್ರಸ್ತೆ ಆಗ್ನೇಯ ಸೆನ್ ಪೊಲೀಸರಿಗೆ ದೂರು ನೀಡಿದ್ದಳು. ದೂರು ದಾಖಲಿಸಿದ ಸೆನ್ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)