ಕಾಂಗ್ರೆಸ್ ಗೆಲ್ಲಲು ಸೂರ್ಯ ನಾರಾಯಣ ರೆಡ್ಡಿಗೆ ಉಸ್ತುವಾರಿ ನೀಡಲು ಹೈಕಮಾಂಡ್ ಚಿಂತನೆ.!

ಕಾಂಗ್ರೆಸ್ ಗೆಲ್ಲಲು ಸೂರ್ಯ ನಾರಾಯಣ ರೆಡ್ಡಿಗೆ ಉಸ್ತುವಾರಿ ನೀಡಲು ಹೈಕಮಾಂಡ್ ಚಿಂತನೆ.!

ಕುರುಗೋಡು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ನಿಟ್ಟಿನಲ್ಲಿ ಕಂಪ್ಲಿ-ಕುರುಗೋಡಲ್ಲಿ ರಾಜಕೀಯ ಕಾವು ದಿನದಿಂದ ದಿನಕ್ಕೆ ರಂಗೇರಿದೆ.

ಹಾಲಿ ಶಾಸಕ ಗಣೇಶ್ ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಹಳ್ಳಿ ಹಳ್ಳಿಗಳಿಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡುತ್ತಾ ಮತದಾರರನ್ನು ಭೇಟಿ ಮಾಡಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಈಗಾಗಲೇ ಟಿಕೇಟ್ ಗಾಗಿ ಬಿಜೆಪಿಯಿಂದ ಕೇವಲ ಮಾಜಿ ಶಾಸಕ ಸುರೇಶ್ ಬಾಬು ಹೆಸರು ಕಂಡು ಬಂದರೆ ಕಾಂಗ್ರೆಸ್ ನಿಂದ ಹಾಲಿ ಶಾಸಕ ಗಣೇಶ್ ಮತ್ತು ನಾರಾಯಣಪ್ಪ, ರಾಜುನಾಯಕ್ ಹೆಸರುಗಳು ಕಂಡು ಬರುತ್ತಿವೆ.

ಇದಲ್ಲದೆ ಕುರುಗೋಡು ಮತ್ತು ಕಂಪ್ಲಿಯ ಕಾಂಗ್ರೆಸ್ ನ ಕೆಲ ಮುಖಂಡರು ಶಾಸಕರ ನಡುವೆ ಒಡನಾಟ ಕಡಿಮೆಯಾಗಿದ್ದು, ಇದರ ಪರಿಣಾಮ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಎದುರಾಗುವ ಸನ್ನಿವೇಶಗಳು ಕಂಡು ಬರುತ್ತಿವೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಶ್ರೀರಾಮುಲು ಅವರಿಗೆ ಟಾಂಗ್ ಕೊಟ್ಟು ಕಂಪ್ಲಿಯಿಂದ ಗಣೇಶ್ ಅವರನ್ನು ಗೆಲ್ಲಿಸಿಕೊಂಡು ಬಂದಿದ್ರು.

ಸದ್ಯ ಈಗ ಜನಾರ್ದನ ರೆಡ್ಡಿ ಕೂಡ ಹೊಸ ಪಕ್ಷ ಕಟ್ಟಿರುವುದರಿಂದ ಅದರಲ್ಲಿ ರೆಡ್ಡಿ ಹಣಬಲ ಹೊಂದಿರುವ ವ್ಯಕ್ತಿಯಾಗಿದ್ದು, ಈ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಕಂಪ್ಲಿ, ಸಿರುಗುಪ್ಪ ಈ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಲು ಸೂರ್ಯನಾರಾಯಣ ರೆಡ್ಡಿ ಅವರಿಗೆ ಉಸ್ತುವಾರಿ ನೀಡಲು ಈಗಾಗಲೇ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಈ ಕುರಿತು ಕೂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಕಂಡು ಬರುತ್ತಿದೆ.

ಜನಾರ್ದನ ರೆಡ್ಡಿ ಹಣ ಬಲ ಯಾವ ರೀತಿ ಹೊಂದಿದ್ದರೋ ಅದರಂತೆ ಕಾಂಗ್ರೆಸ್ ನಲ್ಲಿ ಅದಕ್ಕೆ ತಕ್ಕ ಹಾಗೆ ಹಣಬಲ ಹೊಂದಿರುವ ನಾಯಕರಿಗೆ ಉಸ್ತುವಾರಿ ಕೊಟ್ಟು, ಬಿಜೆಪಿ, ಜೆಡಿಎಸ್, ಕೆ.ಆರ್.ಪಿ.ಪಿ. ಪಕ್ಷವನ್ನು ಕಟ್ಟಿ ಹಾಕಿ ಕಾಂಗ್ರೆಸ್ ನ್ನು ಗೆಲ್ಲಿಸಲು ನಾನಾ ರಣತಂತ್ರಗಳನ್ನು ಕಾಂಗ್ರೆಸ್ ರೂಪಿಸುತ್ತಿದೆ.

ಅದರಲ್ಲಿ ಸೂರ್ಯನಾರಾಯಣ ರೆಡ್ಡಿ ಸಿರುಗುಪ್ಪ, ಕಂಪ್ಲಿ, ಬಳ್ಳಾರಿ, ಸಂಡೂರು ಹೊಸಪೇಟೆ ಸೇರಿದಂತೆ ಇತರೆ ಭಾಗದಲ್ಲಿ ವರ್ಚಸ್ಸು ಚೆನ್ನಾಗಿ ಇರುವ ಕಾರಣ ಕಾಂಗ್ರೆಸ್ ಗೆಲ್ಲಿಸಲು ರೆಡ್ಡಿಯನ್ನು ಮಣಿ ಹಾಕುತ್ತಿದ್ದಾರೆ.

ಈಗಾಗಲೇ ಸೂರ್ಯನಾರಾಯಣ ರೆಡ್ಡಿಗೆ ಉಸ್ತುವಾರಿ ಕೊಡುವ ಸುದ್ದಿ ಕುರುಗೋಡು ಮತ್ತು ಕಂಪ್ಲಿ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದ್ದು, ಇದರಿಂದ ಕೆಲ ತಿಂಗಳಗಳಿಂದ ಸೂರ್ಯನಾರಾಯಣ ರೆಡ್ಡಿಗೆ ಮತ್ತು ಶಾಸಕ ಗಣೇಶ್ ಇಬ್ಬರ ನಡುವೆ ಅಸಮಾಧಾನ ವ್ಯಕ್ತವಾಗಿದ್ದು, ಮೊದಲಿನಂತೆ ಅವರ ನಡವಳಿಕೆಗಳು ಕಂಡು ಬರುತ್ತಿಲ್ಲ. ಆದ್ದರಿಂದ ರೆಡ್ಡಿಗೆ ಉಸ್ತುವಾರಿಯ ಜವಾಬ್ದಾರಿ ಸಿಕ್ಕಿದರೆ ಕಂಪ್ಲಿಯಲ್ಲಿ ಗಣೇಶ್ ಗೆಲ್ಲಲು ಕಂಟಕವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.