ಹೂಟಗಳ್ಳಿ: ಕ್ಯಾನ್‌ಗೆ ಮುಗಿಬಿದ್ದ ಜನರು

ಹೂಟಗಳ್ಳಿ: ಕ್ಯಾನ್‌ಗೆ ಮುಗಿಬಿದ್ದ ಜನರು

ಮೈಸೂರು: ಹೂಟಗಳ್ಳಿಯ ಹೌಸಿಂಗ್ ಬೋರ್ಡ್‌ ಕಾಲೊನಿ ಸರ್ಕಲ್‌ನಲ್ಲಿ ಸಂಕ್ರಾಂತಿ ಪ್ರಯುಕ್ತ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ ಘಟಕದಿಂದ ಭಾನುವಾರ ಎಳ್ಳು, ಬೆಲ್ಲದ ಜತೆಗೆ ಖಾಲಿ ನೀರಿನ ಕ್ಯಾನ್‌ ಹಂಚಲಾಯಿತು. ಈ ವೇಳೆ ಕೆಲಕಾಲ ನೂಕುನುಗ್ಗಲು ಉಂಟಾಯಿತು.

20 ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ 10ಸಾವಿರ ಕ್ಯಾನ್‌ಗಳನ್ನು ಮುಖಂಡ ಹೇಮಂತ್ ಕುಮಾರ್ ಗೌಡ ನೇತೃತ್ವದಲ್ಲಿ ವಿತರಿಸುವ ಕಾರ್ಯಕ್ರಮ ನಡೆಯಿತು. ಹಲವು ವಾಹನಗಳಲ್ಲಿ ಕ್ಯಾನ್‌ಗಳನ್ನು ತುಂಬಿ ರಸ್ತೆಯಲ್ಲೇ ಜನರಿಗೆ ಹಂಚಿದಾಗ ನೂಕು ನುಗ್ಗಲು ಉಂಟಾಯಿತು. ಕ್ಯಾನ್‌ ಪಡೆಯಲು ಧಾವಿಸಿದ ಅನೇಕರು ಬಿದ್ದು ತರಚು ಗಾಯ ಮಾಡಿಕೊಂಡರು. ಮನೆಗಳಿಗೆ ತೆರಳಿ ವಿತರಣೆಗೆ ತಂದಿದ್ದ ಕ್ಯಾನ್‌ಗಳಿದ್ದ ವಾಹನಗಳಿಗೆ ಜನರು ಒಮ್ಮೆಲೇ ಮುತ್ತಿಕೊಂಡರು. ಇದರಿಂದ ಗೊಂದಲ ಉಂಟಾಯಿತು ಎಂದು ಸ್ಥಳೀಯರು ತಿಳಿಸಿದರು.

'ಎಲ್ಲವೂ ವ್ಯವಸ್ಥಿತವಾಗಿ ನಡೆದಿತ್ತು. ವಿತರಣೆಯ ಸಂದರ್ಭದಲ್ಲಿ ನಿರ್ದಿಷ್ಟ ಜಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಮ್ಮೆಲೇ ಬಂದು ಒಂದಕ್ಕಿಂತ ಹೆಚ್ಚು ಕ್ಯಾನ್‌ ಪಡೆಯಲು ಪ್ರಯತ್ನಿಸಿದ್ದರಿಂದ ಸ್ವಲ್ಪ ನೂಕು ನುಗ್ಗಲು ಉಂಟಾಗಿತ್ತು. ಆದರೆ, ಅವಘಡಗಳೇನೂ ಆಗಿಲ್ಲ. ಕಾರ್ಯಕ್ರಮ ಉತ್ತಮವಾಗಿ ನಡೆದಿದೆ' ಎಂದು ಹೇಮಂತಕುಮಾರ್‌ ಗೌಡ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.