ಕಟ್ಟಾ ಹಿಂದುತ್ವದ ಯುವ ಮುಖಕ್ಕೆ ತಲಾಶೆ

ಕಟ್ಟಾ ಹಿಂದುತ್ವದ ಯುವ ಮುಖಕ್ಕೆ ತಲಾಶೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದತ್ತ ಚಿತ್ತ ಹರಿಸುತ್ತಿದ್ದಂತೆ ಆಡಳಿತಾರೂಢ ಬಿಜೆಪಿ “ಕಟ್ಟಾ ಹಿಂದುತ್ವ’ ಅಭ್ಯರ್ಥಿಯ ತಲಾಷೆಗೆ ಮುಂದಾಗಿದೆ.

ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯರನ್ನು ಕಣಕ್ಕಿಳಿಸಿದಂತೆ ಸಿದ್ದರಾಮಯ್ಯ ವಿರುದ್ಧ ಯುವ ಮುಖವನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.

ಸಿದ್ದರಾಮಯ್ಯರನ್ನು ಮುಂದಿನ ಚುನಾವಣೆ ಯಲ್ಲಿ ಕಟ್ಟಿ ಹಾಕುವ ವಿಚಾರ ಚರ್ಚಿಸಲು ಇತ್ತೀಚೆಗೆ ಬಿಜೆಪಿ ಹಿರಿಯ ನಾಯಕರ ಸಭೆ ನಡೆಸಿದ್ದು, ಕಾರ್ಯತಂತ್ರ ರೂಪಿಸಲಾಗಿದೆ. “ಶತ್ರುವಿನ ಶತ್ರು ಮಿತ್ರ’ ಎಂಬಂತೆ ಆಂತರಿಕವಾಗಿ ಜೆಡಿಎಸ್‌ ಬೆಂಬಲ ಪಡೆದು ಸಿದ್ದರಾಮಯ್ಯ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ ತಂತ್ರ
ಈ ಮಧ್ಯೆ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ಅವರನ್ನು ಕಟ್ಟಿ ಹಾಕಲು ಏನು ಮಾಡ ಬೇಕೆಂಬ ಬಗ್ಗೆ ಜೆಡಿಎಸ್‌ನಲ್ಲೂ ಚರ್ಚೆಯಾಗಿದೆ.

ಇತ್ತೀಚೆಗೆ ಪಂಚರತ್ನ ಯೋಜನೆ ಚಾಲನೆಗಾಗಿ ಮುಳಬಾಗಿಲಿಗೆ ಬಂದಿದ್ದ ಎಚ್‌.ಡಿ. ಕುಮಾರಸ್ವಾಮಿ ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಮುಖಂಡರ ಜತೆ ಈ ಕುರಿತು ಸಮಾಲೋಚಿಸಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾದರೆ ಕೋಲಾರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಯಾಗಿರುವ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡರನ್ನು ಜೆಡಿಎಸ್‌ಗೆ ಸೆಳೆದು ಕಣಕ್ಕಿಳಿಸಿದರೆ ಎರಡೂ ಜಿಲ್ಲೆಗಳಲ್ಲಿ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಹಾಲಿ ಶಾಸಕರು ಹಾಗೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ ಅಭ್ಯರ್ಥಿಗಳು ಈ ಕುರಿತು ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡರ ಮೂಲಕ ಕುಮಾರಸ್ವಾಮಿಯವರು ಬ್ಯಾಲಹಳ್ಳಿ ಗೋವಿಂದ ಗೌಡರನ್ನು ಸಂಪರ್ಕಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ಬಿಜೆಪಿ ಹಾಗೂ ಜೆಡಿಎಸ್‌ ಈ ಬಾರಿ ಕೋಲಾರ – ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರ ಭಾಗ

ದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಆದರೆ ಈ ಮೂರು ಜಿಲ್ಲೆಗಳಲ್ಲಿ ಕಳೆದುಕೊಳ್ಳಬಹುದಾದ ಸ್ಥಾನ ಗೆಲ್ಲಲು ಕಾಂಗ್ರೆಸ್‌ನ ಜಿಲ್ಲಾ ನಾಯಕರು ಸಿದ್ದರಾಮಯ್ಯ ಮೊರೆ ಹೋಗಿದ್ದಾರೆ.

ಮೌಖೀಕವಾಗಿ ಸಿದ್ದರಾಮಯ್ಯ ಕೋಲಾರ ಮುಖಂಡರಿಗೆ ಭರವಸೆ ನೀಡಿದ್ದರೂ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಜತೆ ಒಮ್ಮೆ ಮಾತನಾಡಿ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಜನರ ನಾಡಿಮಿಡಿತ ನೋಡಿದ ಮೇಲೆ ಅಂತಿಮ ತೀರ್ಮಾನ ತಿಳಿಸುತ್ತೇನೆಂದು ತಿಳಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಎರಡೆರಡು ಸಂಸ್ಥೆಗಳಿಂದ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಆಗುವ ಸಾಧಕ-ಬಾಧಕ ಕುರಿತು ಆಂತರಿಕ ಸಮೀಕ್ಷೆಯೂ ನಡೆಯುತ್ತಿದ್ದು, ನ.10ರೊಳಗೆ ಆ ವರದಿಯೂ ಬರಲಿದೆ. ಬದಲಾಗಬಹುದಾದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಸರ್ವಜ್ಞ ನಗರ ಸೂಕ್ತ?
ಬಿಜೆಪಿ-ಜೆಡಿಎಸ್‌ ಕಾರ್ಯತಂತ್ರ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಆಪ್ತ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ವರುಣಾ ಬಿಟ್ಟರೆ ಬೆಂಗಳೂರಿನ ಚಾಮರಾಜಪೇಟೆಯಲ್ಲೇ ಸ್ಪರ್ಧಿಸಿ, ಕೋಲಾರಕ್ಕೆ ಹೋಗಬೇಡಿ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದರ ನಡುವೆ ಸರ್ವಜ್ಞ ನಗರದಲ್ಲಿ ಸ್ಪರ್ಧಿಸುವುದು ಸೂಕ್ತ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಸರ್ವಜ್ಞ ನಗರದಲ್ಲಿ ಹೆಚ್ಚು ಮುಸ್ಲಿಂ ಮತದಾರರಿದ್ದು, ಸಮಸ್ಯೆ ಆಗದು ಎಂಬುದು ಆಪ್ತರ ವಾದ ಎನ್ನಲಾ ಗಿದೆ. ಅಲ್ಲಿ ಸಿದ್ದರಾಮಯ್ಯನವರ ಹಿಂದಿನ ಶಿಷ್ಯ ಪದ್ಮನಾಭ ರೆಡ್ಡಿ ಅವರನ್ನು ಅಭ್ಯರ್ಥಿ ಯಾಗಿಸಲು ಬಿಜೆಪಿ ಸಿದ್ಧತೆ ನಡೆಸಿದೆ.