ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‍ಗೆ ಕಾಂಗ್ರೆಸ್ ಆಗ್ರಹ

ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‍ಗೆ ಕಾಂಗ್ರೆಸ್ ಆಗ್ರಹ

ಬೆಳಗಾವಿ,ಡಿ.15-ಎಪಿಎಂಸಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವಂತೆ ಸರ್ಕಾರವನ್ನು ಆಗ್ರಹಿಸಲು ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಎಪಿಎಂಸಿ ಕಾಯ್ದೆ ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸುವುದು, ಭೂ ಸುಧಾರಣಾ ಪಡಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಮತಾಂತರ ನಿಷೇಧ ತಿದ್ದುಪಡಿ ವಿಧೇಯಕವನ್ನು ಸರ್ಕಾರ ಮಂಡನೆ ಮಾಡಿದರೆ ವಿರೋಧಿಸಲು ನಿರ್ಧರಿಸಲಾಗಿದೆ.

ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಆಗಿರುವ ವಿಳಂಬದ ಬಗ್ಗೆ ಪ್ರಸ್ತಾಪಿಸುವುದು, ಗುತ್ತಿಗೆದಾರರಿಂದ ಶೇ.40ರಷ್ಟು ಕಮೀಷನ್ ಪಡೆಯುವ ಆರೋಪ ಕೇಳಿಬಂದಿರುವುದು ಹಾಗೂ ಭಾರೀ ಸದ್ದು ಮಾಡಿದ ಬಿಟ್ ಕಾಯಿನ್ ಹಗರಣದ ಪ್ರಸ್ತಾಪವನ್ನು ಸದನದಲ್ಲಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಯಾವ ಯಾವ ವಿಚಾರಗಳನ್ನು ವಿಧಾನಸಭೆಯಲ್ಲಿ ಹಾಗೂ ಮೇಲ್ಮನೆಯಲ್ಲಿ ಪ್ರಸ್ತಾಪ ಮಾಡಬೇಕೆಂಬ ಬಗ್ಗೆ ಚರ್ಚಿಸಲಾಗಿದೆ.

ಅಭಿನಂದನೆ:
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ಚುನಾಯಿತರಾದ ನೂತನ ಸದಸ್ಯರಿಗೆ ಅಭಿನಂದನೆ ಕೂಡ ಶಾಸಕಾಂಗ ಸಭೆಯಲ್ಲಿ ಸಲ್ಲಿಸಲಾಯಿತು. ಕೆಲವು ಕ್ಷೇತ್ರಗಳಲ್ಲಿ ಅನಿರೀಕ್ಷಿತವಾಗಿ ಪಕ್ಷಕ್ಕೆ ಸೋಲಾಗಿರುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾಂಗ್ರೆಸ್‍ಗೆ ಆಗಿರುವ ಹಿನ್ನಡೆ ಬಗೆ ಅಸಮಾಧಾನ ವ್ಯಕ್ತವಾಗಿದೆ.