ಉಳ್ಳಾಲ: ಮಾ.25, 26 ರಂದು ನಿಂತುಹೋಗಿದ್ದ ಲವ-ಕುಶ ಜೋಡುಕರೆ ಕಂಬಳಕ್ಕೆ ಚಾಲನೆ

ಉಳ್ಳಾಲ: ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ-ಬೋಳ ಎಂಬಲ್ಲಿ ಶಾಸಕ ಯು.ಟಿ.ಖಾದರ್ ಅನುದಾನದಿಂದ ನಿರ್ಮಾಣಗೊಂಡ ಕಂಬಳ ಕರೆ ಉದ್ಘಾಟನೆಗೊಂಡಿದ್ದು, ಇಲ್ಲಿ ಮಾರ್ಚ್ 25,26 ರಂದು ಕಾರಣಾಂತರಗಳಿಂದ ನಿಂತು ಹೋಗಿದ್ದ ಲವ-ಕುಶ ಜೋಡುಕರೆ ಕಂಬಳ ನಡೆಯಲಿದೆ.
ಮೋರ್ಲ-ಬೋಳದ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಸರಕಾರಿ ಕಂಬಳ ಕರೆಯನ್ನ ಬುಧವಾರ ಲವ-ಕುಶ ಜೋಡುಕರೆ ಕಂಬಳ ಉತ್ಸವ ಸಮಿತಿಯ ಗೌರವಾಧ್ಯಕ್ಷ ವೆಂಕಪ್ಪ ಕಾಜವ ಅವರು ಉದ್ಘಾಟಿಸಿದರು.
ಶಾಸಕ ಯು.ಟಿ ಖಾದರ್ ಮಾತನಾಡಿ ಕಂಬಳ ಮತ್ತು ಯಕ್ಷಗಾನ ಕರಾವಳಿಯ ಎರಡು ಕಣ್ಣುಗಳಿದ್ದಂತೆ. ಯಕ್ಷಗಾನದಂತಹ ವಿಶಿಷ್ಟ ಕಲೆ,ಕಂಬಳದಂತಹ ಕರಾವಳಿಯ ಸಂಸ್ಕೃತಿಯನ್ನ ಭವಿಷ್ಯದಲ್ಲಿ ಉಳಿಸುವ ಜವಾಬ್ದಾರಿ ಯುವಪೀಳಿಗೆ ಮೇಲಿದೆ. ನರಿಂಗಾನದಲ್ಲಿ ಕಂಬಳ ಕರೆ ನಿರ್ಮಾಣವಾದ ಕಾರಣ ಗ್ರಾಮೀಣ ಮಟ್ಟದ ಈ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.ಈ ಹಿಂದೆ ತಲಪಾಡಿಯಲ್ಲಿ ನಡೆಯುತ್ತಿದ್ದ ಕಂಬಳಕ್ಕೆ ರಾಜ್ಯ ಸರ್ಕಾರವು ಪ್ರಥಮ ಬಾರಿ ಅನುದಾನ ನೀಡಿತ್ತು.ಇದೀಗ ನರಿಂಗಾನದಲ್ಲಿ ಸರಕಾರಿ ಅನುದಾನದಲ್ಲೇ ಸುಸಜ್ಜಿತ ಕಂಬಳ ಕರೆಯು ನಿರ್ಮಾಣವಾಗಿದ್ದು ಈ ಗ್ರಾಮಕ್ಕೆ ಹೆಮ್ಮೆಯ ವಿಚಾರ ಎಂದರು.
ಲವ-ಕುಶ ಜೋಡುಕೆರೆ ಕಂಬಳ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಮಾತನಾಡಿ ಕಂಬಳ ಎಂಬುದು ಎಲ್ಲಾ ಧರ್ಮೀಯರೂ ಪಾಲ್ಗೊಳ್ಳುವ ಉತ್ಸವವಾಗಿದೆ.ಕರಾವಳಿಗರ ಜನಪದ ಕ್ರೀಡೆ ಕಂಬಳಕ್ಕೆ ಸರ್ಕಾರ ಬಜೆಟಲ್ಲಿ ಅನುದಾನ ಮೀಸಲಿಡಬೇಕು.ರಾಜ್ಯೋತ್ಸವ ಪ್ರಶಸ್ತಿಗಳನ್ನು ಶಿಫಾರಸು,ಒತ್ತಡಕ್ಕೆ ಮನಿದು ನೀಡದೆ,ಆದ್ಯತೆ ಮೇರೆಗೆ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಕಾನೂನು ತಂದು ಕಂಬಳ ಕೂಟ ನಡೆಸಿ ಸಾಧಕರನ್ನು ಗೌರವಿಸಬೇಕು,ಕಂಬಳ ಓಟಗಾರರಿಗೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂದರು.
ಕುದಿಕಂಬಳ: ನರಿಂಗಾನ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಸರಕಾರಿ ಕಂಬಳ ಕರೆಯಲ್ಲಿ ಬುಧವಾರದಂದು ಕೋಣಗಳ ಕುದಿ ಕಂಬಳ ನಡೆಯಿತು.ವಿವಿಧ ಗುತ್ತಿನ ಮನೆತನದ ಕೋಣಗಳನ್ನ ಕರೆಯಲ್ಲಿ ಪ್ರಾತ್ಯಕ್ಷಿಕೆಗಾಗಿ ಓಡಿಸಲಾಯಿತು.ಈ ಸರಕಾರಿ ಕಂಬಳ ಕರೆಯಲ್ಲಿ ಈ ಹಿಂದೆ ಪಜೀರು ಗ್ರಾಮದಲ್ಲಿ ನಡೆಸಲ್ಪಡುತ್ತಿದ್ದ ಲವ-ಕುಶ ಜೋಡುಕರೆ ಕಂಬಳ ಇದೇ ಮಾರ್ಚ್ 25,26 ರಂದು ನಡೆಯಲಿದೆ.ಪಜೀರಿನಲ್ಲಿ ಸುಮಾರು 25 ವರುಷಗಳಿಂದ ನಡೆಯುತ್ತಿದ್ದ ಲವ-ಕುಶ ಜೋಡು ಕರೆ ಕಂಬಳವು ಸ್ಥಳಾವಕಾಶದ ಕೊರತೆ ಇನ್ನಿತರ ಕಾರಣಗಳಿಂದ ನಿಂತು ಹೋಗಿತ್ತು.
ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಬೋಳ ಸಂತ ಲಾರೆನ್ಸ್ ಚರ್ಚ್ ಧರ್ಮಗುರು ಫೆಡ್ರಿಕ್ ಕೊರೆಯಾ,ಲವ-ಕುಶ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಗುಣಪಾಲ ಕಡಂಬ,ಜಿ.ಪಂ.ಮಾಜಿ ಸದಸ್ಯೆ ಮಮತಾ ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ನವೀನ್ ಚಂದ್ರ ಆಳ್ವ ತಿರುವೈಲ್ ಗುತ್ತು, ಬಿ.ಆರ್.ಶೆಟ್ಟಿ, ಮಹಾಬಲ ಆಳ್ವ, ಮನ್ಮತ್ ಜೆ.ಶೆಟ್ಟಿ, ರವೀಂದ್ರ ಶೆಟ್ಟಿ ತಲಪಾಡಿ ದೊಡ್ಡಮನೆ, ರಾಮಣ್ಣ ಶೆಟ್ಟಿ ಆಳ್ವರಬೆಟ್ಟು, ತಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಬಾಲಕೃಷ್ಣ ರೈ ಬಿಳಿಯೂರು, ಎನ್.ಎಸ್.ಕರೀಂ, ಸಾಹುಲ್ ಹಮೀದ್, ಭರತ್ ರಾಜ್ ಶೆಟ್ಟಿ ಪಜೀರ್ ಗುತ್ತು, ದೇವಪ್ಪ ಮಾಸ್ಟರ್, ನ್ಯಾಯವಾದಿ ರತ್ನಾಕರ ಶೆಟ್ಟಿ ಮೋರ್ಲ, ಪ್ರಭಾಕರ ರೈ ನೆತ್ತಿಲಕೋಡಿ, ಲಕ್ಷ್ಮಣ ಮಾಸ್ಟರ್, ಅತ್ತಾವುಲ್ಲಾ ಪರ್ತಿಪ್ಪಾಡಿ, ನಾರಾಯಣ ಶೆಟ್ಟಿ, ಚಂದ್ರಹಾಸ ಶೆಟ್ಟಿ ಮೋರ್ಲ, ಅಬ್ದುಲ್ ಜಲೀಲ್ ಮೋಂಟುಗೋಳಿ, ಮುರಳೀಧರ ಶೆಟ್ಟಿ ಮೋರ್ಲ, ನಾಸೀರ್ ನಡುಪದವು, ನಾರಾಯಣ ಶೆಟ್ಟಿ ಬಲೆತ್ತೋಡು, ಸಿದ್ದೀಕ್ ಪಾರೆ ಇನ್ನಿತರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವಾಝ್ ಕಲ್ಲರಕೋಡಿ ಸ್ವಾಗತಿಸಿದರು. ಅಬ್ದುಲ್ ಜಲೀಲ್ ಮೋಂಟುಗೋಳಿ ವಂದಿಸಿದರು. ಪತ್ರಕರ್ತ ಸತೀಶ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.