ಉಮೇಶ್ ಕತ್ತಿ, ಆನಂದ ಮಾಮನಿ ಕ್ಷೇತ್ರಗಳಿಗೆ ಅಭ್ಯರ್ಥಿಗಳಿಲ್ಲದೆ ಹೆಣಗಾಡುತ್ತಿರುವ ಬಿಜೆಪಿ

ಬೆಂಗಳೂರು,ನ.17 ; ಶಾಸಕರಾದ ಉಮೇಶ ಕತ್ತಿ (ಹುಕ್ಕೇರಿ) ಮತ್ತು ಆನಂದ ಮಾಮನಿ (ಸವದತ್ತಿ) ನಿಧನದಿಂದ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾಗುವ ನಿರೀಕ್ಷೆಯಿದೆ.
ಏಕೆಂದರೆ ಆಡಳಿತ ಪಕ್ಷವು 2023ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಗೆಲುವಿನ ಸರಣಿಯನ್ನು ಮುಂದುವರಿಸಲು ಸಮರ್ಥವಾದ ಅಭ್ಯರ್ಥಿಗಳನ್ನು ಹುಡುಕಲು ಹೆಣಗಾಡುತ್ತಿದೆ.
ಕಳೆದ ಮೂರು ಚುನಾವಣೆಗಳಲ್ಲಿ ಹುಕ್ಕೇರಿ ಮತ್ತು ಸವದತ್ತಿ ಕ್ಷೇತ್ರಗಳಲ್ಲಿ ಉಮೇಶ್ ಕತ್ತಿ ಮತ್ತು ಮಾಮನಿ ನಿರಾಯಾಸ ಗೆಲುವು ದಾಖಲಿಸಿದ್ದಾರೆ. ಸಹಾನುಭೂತಿಯ ಅಂಶವನ್ನು ಲಾಭ ಮಾಡಿಕೊಳ್ಳಲುಮಹವಣಿಸುತ್ತಿರುವ ಬಿಜೆಪಿ ನಿಧನರಾದ ಶಾಸಕರ ಎರಡೂ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಲಿದೆಯೇ ಎಂದು ನೋಡಬೇಕಾಗಿದೆ.
ಆದರೆ, ಇದರ ನಡುವೆ ಕೆಲವು ಬಿಜೆಪಿ ನಾಯಕರು ಹೊಸ ಮುಖಗಳಿಗೆ ಮಣೆ ಹಾಕಬೇಕೆಂದು ಬಯಸುತ್ತಿದ್ದಾರೆ.ಚಿಕ್ಕೋಡಿ ಮಾಜಿ ಸಂಸದ ಹಾಗೂ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರನ್ನು ಕಣಕ್ಕಿಳಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ,ಕತ್ತಿ ಕುಟುಂಬ ತಮ್ಮ ಮುಂದಿನ ನಡೆಯ ಬಗ್ಗೆ ಯಾವುದೇ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ.
ನಾನು ಚುನಾವಣೆಯಲ್ಲಿ ಸ್ರ್ಪಸಲು ಉತ್ಸುಕನಾಗಿಲ್ಲ, ನನ್ನ ಬದಲಿಗೆ ಉಮೇಶ್ ಕತ್ತಿ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸುವಂತೆ ಪಕ್ಷಕ್ಕೆ ಮನವಿ ಮಾಡಿರುವುದಾಗಿ ರಮೇಶ್ ಕತ್ತಿ ಹೇಳಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ.
ಆದರೆ, ನಿಖಿಲ್ ಇನ್ನೂ ಚಿಕ್ಕವನಾಗಿರುವುದರಿಂದ ನಾನು ಸ್ರ್ಪಸಬೇಕೆಂದು ಪಕ್ಷ ಬಯಸಿದೆ, ಪಕ್ಷಕ್ಕೆ ಆಸಕ್ತಿಯಿದ್ದರೆ ಬೇರೆಯವರಿಗೂ ದಾರಿ ಮಾಡಿಕೊಡಲು ನಾನು ಸಿದ್ದನಿದ್ದೇನೆ ಎಂದು ರಮೇಶ್ ಕತ್ತಿ ತಿಳಿಸಿದ್ದಾರೆ.
ಹುಕ್ಕೇರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಪಕ್ಷದ ನಾಯಕತ್ವವು ಒತ್ತಾಯಿಸಿದರೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಿದ್ಧ ಎಂದು ರಮೇಶ್ ಸ್ಪಷ್ಟ ಪಡಿಸಿದ್ದಾರೆ.
ಕಳೆದ ಒಂಭತ್ತು ವಿಧಾನಸಭಾ ಚುನಾವಣೆಗಳಲ್ಲಿ ಉಮೇಶ್ ಕತ್ತಿ ಎಂಟು ಬಾರಿ ಗೆದ್ದಿರುವ ಹುಕ್ಕೇರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಉತ್ಸುಕವಾಗಿದೆ.ಉಮೇಶ್ ಕತ್ತಿ ನಾಲ್ಕು ಬಾರಿ 1985 ರಿಂದ 1999 ರವರೆಗೆ ಜನತಾ ದಳ ಟಿಕೆಟ್ನಲ್ಲಿ ಗೆದ್ದರು. ಆದರೆ, 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತರು. ಹಾಗೂ ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಟಿಕೆಟ್ನಲ್ಲಿ ಗೆಲುವು ಸಾಸಿದ್ದಾರೆ.
ಇನ್ನು ಕೆಲವೇ ವಾರಗಳಲ್ಲಿ ಹುಕ್ಕೇರಿಗೆ ಒಮ್ಮತದ ಬಿಜೆಪಿ ಅಭ್ಯರ್ಥಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಬೆಳಗಾವಿ ಉತ್ತರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎ.ಬಿ.ಪಾಟೀಲ್‌ಅವರು ಉಮೇಶ ಕತ್ತಿ ನಿಧನದ ನಂತರ ತವರು ಕ್ಷೇತ್ರವಾದ ಹುಕ್ಕೇರಿಯಿಂದ ಸ್ರ್ಪಸಲು ಉತ್ಸುಕರಾಗಿದ್ದಾರೆ.
ಒಂದು ವೇಳೆ ರಮೇಶ್ ಕತ್ತಿ ಮತ್ತು ಎ.ಬಿ.ಪಾಟೀಲ್ ಕಣಕ್ಕೆ ಇಳಿದರೇ ಹುಕ್ಕೇರಿಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಡಲಿದೆ.ಕಳೆದ ಮೂರು ಚುನಾವಣೆಗಳಲ್ಲಿ ಆನಂದ್ ಮಾಮನಿ ಗೆದ್ದಿದ್ದ ಮತ್ತೊಂದು ಪಕ್ಷದ ಭದ್ರಕೋಟೆಯಾದ ಸವದತ್ತಿಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ.
ಸವದತ್ತಿಯಲ್ಲಿ ಮಾಮನಿಗೆ ಬದಲಾಗಿ ಸೂಕ್ತ ಅಭ್ಯರ್ಥಿಯ ಕೊರತೆಯಿದೆ. ಅವರ ಪತ್ನಿ ರತ್ನಾ ಸಕ್ರಿಯ ರಾಜಕಾರಣಿಯಲ್ಲ. ಅವರ ಮಕ್ಕಳು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಲು ಇನ್ನೂ ಚಿಕ್ಕ ವಯಸ್ಸಿನವರಾಗಿದ್ದಾರೆ.