ಮಹದೇವಪುರ:- ಕ್ಷೇತ್ರದ ಕಾಡುಗೋಡಿ ಬಳಿಯ 22 ಎಕರೆಯ ವಿಸ್ತೀರ್ಣವಿರುವ ಟ್ರೀ ಪಾರ್ಕ್, ಕನ್ನಮಂಗಲ ಗೇಟ್ ನಲ್ಲಿ 70 ಎಕರೆ ವಿಸ್ತೀರ್ಣವಿರುವ ಸಸ್ಯ ಶಾಸ್ತ್ರೀಯ ತೋಟ ಹಾಗೂ ನಿಂಬೆಕಾಯಿಪುರದ ಜನಪದರು ರಂಗಮಂದಿರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಇದೇ ಬುಧವಾರ ರಂದು ಉದ್ಘಾಟಿಸಲಿದ್ದಾರೆ ಎಂದು ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಕ್ಷೇತ್ರದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಸ್ಥಳವನ್ನು ಸೋಮವಾರ ದಂದು ಅಧಿಕಾರಿಗಳೊಂದಿಗೆ ಪರಿವೀಕ್ಷಣೆ ನಡೆಸಿ ನಂತರ ಮಾತನಾಡಿದರು.
ನಗರದ ಮಿನಿ ಲಾಲ್ ಬಾಗ್ ಎಂಬ ಖ್ಯಾತಿಗೆ ನನ್ನ ಕ್ಷೇತ್ರದ ಗ್ರಾಮಾಂತರ ಭಾಗದ ಕನ್ನಮಂಗಲದ ಸಸ್ಯ ಶಾಸ್ತ್ರೀಯ ತೋಟ ಸಾಕ್ಷಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸುಮಾರು 70 ಎಕರೆ ವಿಸ್ತೀರ್ಣದಲ್ಲಿ 5.5 ಕೋಟಿ ಅನುದಾನದಲ್ಲಿ ನಿರ್ಮಾಣ ಗೊಂಡಿರುವ ಈ ಮಿನಿ ಲಾಲ್ ಬಾಗ್ 04 ಸಾವಿರ ಗಿಡ, ಮರಗಳನ್ನು ಒಳಗೊಂಡಿದೆ. ಸುಮಾರು 03 ಕಿಲೋ ಮೀಟರ್ ವಾಕಿಂಗ್ ಟ್ರ್ಯಾಕ್ ಸಹಾ ನಿರ್ಮಿಸಲಾಗಿದೆ. ಅಲ್ಲದೇ ಕಾಡಿಗೋಡಿಯ ಟ್ರೀ ಪಾರ್ಕ್ ಸಹ ಉದ್ಘಾಟನೆಗೆ ಸಿದ್ಧವಾಗಿದ್ದು ಸುಮಾರು 22 ಎಕರೆ ವಿಸ್ತೀರ್ಣದಲ್ಲಿ ಸಾವಿರಾರು ಗಿಡ ಮರಗಳು, ವಾಕಿಂಗ್ ಟ್ರಾಕ್, ಜಿಮ್ ಪರಿಕರಗಳು ಸೌಲಭ್ಯಗಳು ಒಳಗೊಂಡಿದೆ ಎಂದು ತಿಳಿಸಿದರು.
ಇನ್ನು ಉಳಿದಂತೆ ಕನ್ನಮಂಗಲದ ಮುಳ್ಳುಗೆರೆ ಕೆರೆ ಹಾಗೂ ನಿಂಬೆಕಾಯಿಪುರ ದಲ್ಲಿರುವ ಜನಪದರು ರಂಗಮಂದಿರ ಉದ್ಘಾಟನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಪಿ ದೇವರಾಜ್, ಕಾರ್ಯ ನಿರ್ವಾಹಕ ಅಧಿಕಾರಿ ಮಂಜುನಾಥ್, ತಹಶಿಲ್ದಾರ್ ಅಜಿತ್ ರೈ, ಎಸಿಪಿ ಮನೋಜ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು, ಮುಖಂಡರು ಹಾಜರಿದ್ದರು.