ಗೋ ಬ್ಯಾಕ್ ಅಶೋಕ್' ಅಂತ ನಾವು ಹೇಳಿಲ್ಲ...: ಸಚಿವ ನಾರಾಯಣ ಗೌಡ

ಗೋ ಬ್ಯಾಕ್ ಅಶೋಕ್' ಅಂತ ನಾವು ಹೇಳಿಲ್ಲ...: ಸಚಿವ ನಾರಾಯಣ ಗೌಡ

ಮಂಡ್ಯ: ಮಂಡ್ಯ ಜಿಲ್ಲೆಯ ಉಸ್ತುವಾರಿ ಸ್ಥಾನದಿಂದ ಕಂದಾಯ ಸಚಿವ ಆರ್‌.ಅಶೋಕ್ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಕೆ.ಆರ್ ಪೇಟೆ ಶಾಸಕ ಹಾಗೂ ಕ್ರೀಡಾ ಸಚಿವ ನಾರಾಯಣ ಗೌಡ ಪ್ರತಿಕ್ರಿಯಿಸಿದ್ದಾರೆ.

ಸಂತೆಬಾಚಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ನಾವು ಯಾರಿಗೂ ಗೋ ಬ್ಯಾಕ್ ಅಂತ ಹೇಳಿಲ್ಲ.

ಪಕ್ಷದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿರುತ್ತವೆ. ಅದಕ್ಕೆ ಅವರನ್ನು ಓಡಿಸೋದಕ್ಕೆ ಆಗುತ್ತಾ ಎಂದ ಅವರು, ನನಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವುದು ಬೇಕಿಲ್ಲ' ಎಂದು ತಿಳಿಸಿದರು.

ಹೈಕಮಾಂಡ್ ಗೆ ಬೇರೆ ಯಾರ ಹೆಸರನ್ನಾದರೂ ಸೂಚಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ನನಗೆ ಯಾರ ಬಗ್ಗೆಯೂ ಒಲವಿಲ್ಲ, ಪಕ್ಷದಲ್ಲಿ ನಾನಿನ್ನೂ ಚಿಕ್ಕವ, ಹೈಕಮಾಂಡ್ ನನ್ನನ್ನು ಸೂಚಿಸಲ್ಲ. ಮತ್ತೆ ಅಶೋಕ್ ಅವರನ್ನೇ ನೇಮಕ ಮಾಡಿದರೆ ಆ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದರು.

ಸಚಿವ ಆರ್‌. ಅಶೋಕ್‌ ಅವರಿಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಅಶೋಕ್ ವಿರುದ್ಧ ಜಿಲ್ಲೆಯ ಮೂಲ ಬಿಜೆಪಿಗರು ವಿರೋಧ ವ್ಯಕ್ತಪಡಿಸಿದ್ದರು. 'ಗೋ ಬ್ಯಾಕ್' ಅಭಿಯಾನವನ್ನು ಕೂಡ ನಡೆಸಿದ್ದರು. ಇದರಿಂದ ಮುಜುಗರಗೊಂಡ ಅಶೋಕ್ ಬಳಿಕ ಸಿಎಂಗೆ ಪತ್ರ ಬರೆದು ಉಸ್ತುವಾರಿ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.