ಆಂಗ್ಲ ಭಯೋತ್ಪಾದನೆ

ಆಂಗ್ಲ ಭಯೋತ್ಪಾದನೆ

ಮ್ಮ ತಲೆಮಾರಿನವರು ಎ ಬಿ ಸಿ ಡಿಯ ಮುಖ ನೋಡಿದ್ದೇ ಮಿಡ್ಲ್ ಸ್ಕೂಲಿನಲ್ಲಿ. ಆಂಗ್ಲ ಪದ್ಯಗಳನ್ನು ಕಂಠಪಾಠ ಮಾಡಿ, ಮನೆಗೆ ಬಂದ ನಂಟರೆದುರು ವಾಚಿಸುತ್ತಿದ್ದೆವು. ಹೈಸ್ಕೂಲಿನಲ್ಲಿ ಇಂಗ್ಲೀಷಿನ ಶಿಕ್ಷಕರು ಅಂಗ್ರೇಜಿಯಲ್ಲಿ ಡಿಕ್ಟೇಶನ್ ಬರೆಯಿಸಿ, ಬಳಿಕ ಚೆಕ್ ಮಾಡುತ್ತಿದ್ದರು . ಶಿಕ್ಷಕರು ಆಘಾತಗೊಳ್ಳುವಷ್ಟು ಕಾಗುಣಿತ ದೋಷ ಮಾಡುತ್ತಿದ್ದೆವು . ಅಂಗ್ರೇಜಿಯ ಅನಿಯಮಿತ ಕಾಗುಣಿತ ದೊಡ್ಡ ಸಮಸ್ಯೆಯಾಗಿತ್ತು . ಸೈಕಾಲಜಿ ಶಬ್ದವು ಪಿ ಅಕ್ಷರದಿಂದ ಶುರುವಾಗುತ್ತದೆ ಎಂದರಿತಾಗ ನನಗೆ ಮೂರ್ಛೆ ಬಂದಿತ್ತು . ಕರ್ನಲ್ ಶಬ್ದದಲ್ಲಿ ಆರ್ ಅಕ್ಷರವೇ ಇರುವುದಿಲ್ಲವೆಂದಾಗಲೂ ಆಶ್ಚರ್ಯದಿಂದ ಆಘಾತವಾಗಿ ಎರಡು ದಿನ ಸುಧಾರಿಸಿಕೊಂಡಿದ್ದೆ . ಆಂಗ್ಲರು ನುಡಿದಂತೆ ನಡೆಯದವರು . ಬರೆಯುವುದೊಂದು ಹೇಳುವುದೊಂದು . ನನಗೆ ಗೊತ್ತಿಲ್ಲ , ಅವರಿಗೆ ಗೊತ್ತಿಲ್ಲ , ಅದಕ್ಕೆ / ಅವಳಿಗೆ / ಅವನಿಗೆ ಗೊತ್ತಿಲ್ಲ - ಎಂಬ ವಾಕ್ಯಗಳಲ್ಲಿ ಮೊದಲನೇ ನಾಮ ಪದಗಳಲ್ಲಷ್ಟೆ ಪರಿವರ್ತನೆ ಸಂಭವಿಸುತ್ತದೆ . ಕ್ರಿಯಾಪದಗಳಲ್ಲಿ ಅಲ್ಲ . ಆದರೆ ಅಂಗ್ರೇಜಿಯಲ್ಲಿ ಹಿ , ದೆ ಗಳ ನಂತರ ಡೂ , ಶಿ , ಹಿ , ಇಟ್‌ಗಳ ಡಸ್ ಹಚ್ಚಬೇಕು . ಹೀಗೆಂದು ಮೇಷ್ಟರು ಗಂಟಲು ಹರಕೊಂಡರೂ ನಾವು ಎಲ್ಲದಕ್ಕೂ ಡು ಹಚ್ಚುತ್ತಿದ್ದೆವು . ಇಂಗ್ಲಿಷು ನಮ್ಮನ್ನು ಆಳವಾದ ಸೋಲು ಮತ್ತು ಕೀಳರಿಮೆಗೆ ತಳ್ಳಿತ್ತು . ಅದರಲ್ಲಿ ಮಾಡುತ್ತಿದ್ದ ತಪ್ಪುಗಳಿಗಾಗಿ ನಾವು ಯಾವುದೇ ವಧಾಸ್ತಂಭಕ್ಕೆ ಪ್ರತಿರೋಧವಿಲ್ಲದೆ ಕೊರಳೊಡ್ಡುವ ಪಶುವಿನಂತೆ ಶಿಕ್ಷೆ ಅನುಭವಿಸುವುದಕ್ಕೆ ಸಿದ್ಧರಿದ್ದೆವು .

ಗ್ರಾಮೀಣ ಪ್ರದೇಶದ ಮತ್ತು ನಗರದ ಕೆಳ ಮಧ್ಯಮವರ್ಗದ ಮಕ್ಕಳಿಗೆ ಮನೆಯಲ್ಲಿ ಮತ್ತು ಬೀದಿಯಲ್ಲಿ ಇಂಗ್ಲಿಷ್ ಇರಲಿಲ್ಲ. ತರಗತಿಯಲ್ಲಷ್ಟೆ ಪ್ರತ್ಯಕ್ಷವಾಗುತ್ತಿತ್ತು. ಇಂಗ್ಲಿಷಿನಲ್ಲಿ ಪಾಸಾಗುವುದು ಜೀವಘಾತಕ ಕಂಟಕದಿಂದ ಪಾರಾದಂತೆ ಎಂಬ ಭಾವನೆಯಿತ್ತು. ಕಪ್ಪುಬಣ್ಣ ಪಡೆದಿದ್ದಕ್ಕೆ ಹೆಣ್ಣಾಗಿ ಹುಟ್ಟಿದ್ದಕ್ಕೆ ಕೆಳಜಾತಿಯಲ್ಲಿ ಬಂದಿದ್ದಕ್ಕೆ ಸಿಗುತ್ತಿದ್ದ ಅಪಮಾನಗಳೇ ಇಂಗ್ಲಿಷಿನಲ್ಲಿ ಸಿಗುತ್ತಿದ್ದವು. ಇದಕ್ಕಾಗಿ ಕೆಲವರು ನಮ್ಮೂರಿಗೆ ಸಮೀಪದ ಎಸ್ಸೆಸ್ಸೆಲ್ಸಿಗೆ ಗೊಪ್ಪೇನಹಳ್ಳಿ ಹೈಸ್ಕೂಲಿಗೆ ವರ್ಗ ಮಾಡಿಸಿಕೊಳ್ಳುತ್ತಿದ್ದರು. ಇದು ಇಂಗ್ಲಿಷಿಗೆ ಸಾಮೂಹಿಕ ಕಾಪಿ ಮಾಡಿಸುವುದಕ್ಕೆ ಖ್ಯಾತವಾಗಿತ್ತು. ಹೊರಗಿನಿಂದ ತನಿಖಾ ಸ್ಕಾ ಡು ಬರದಂತೆ, ಬಂದರೆ ಚೀಟಿಗಳನ್ನು ಕಣ್ಮರೆಗೊಳ್ಳುವಂತೆ ಮಾಡಲು ಅಲ್ಲಿ ವ್ಯವಸ್ಥೆಯಿತ್ತು. ಸರ್ಕಾರಿ ಕೆಲಸಕ್ಕೆ ಎಸ್ಸೆಸ್ಸೆಲ್ಸಿ ಕನಿಷ್ಠ ಅಗತ್ಯವಾಗಿದ್ದರಿಂದ, ಬಂಧುಗಳಲ್ಲಿ ಅನೇಕರು ಗೊಪ್ಪೇನಹಳ್ಳಿ ಹೋಗಿ ಅಂಕಪಟ್ಟಿ ಹಿಡಿದು ದಿಗ್ವಿಜಯ ಪಡೆದ ಸೇನಾನಿಗಳಂತೆ ಬಂದರು. ಅವರಲ್ಲಿ ಸಣ್ಣಕ್ಕನ ಗಂಡನೂ ಒಬ್ಬರು. ಆದರೆ ನಾನು ನಮ್ಮೂರ ಹೈಸ್ಕೂಲಿನಲ್ಲೇ ಇದ್ದು, ೩೦ ಅಂಕಗಳಿಸಿ ಪಾಸಾದೆ. 25ರ ಆಸುಪಾಸು ಬಂದಾಗ ಪರೀಕ್ಷಕರು ಬದುಕಿಕೊಳ್ಳಲು ಎಂದು ಸಹಾನುಭೂತಿಯಿಂದ 30ಕ್ಕೆ ದೂಡಿ ದುಂಡು ಸುತ್ತುತ್ತಿದ್ದರು. ಪಾಸಿಗೆ ಬೇಕಾದ ಉಳಿದ ಐದು ಅಂಕಗಳನ್ನು ಕನ್ನಡದ ಲೆಕ್ಕದಿಂದ ಸೇರಿಸಿ ಪಾಸು ಮಾಡುವ ವ್ಯವಸ್ಥೆ ಆಗಿತ್ತು. ಈ ಪರಿಯಿಂದ ಬ್ರಿಟಿಷ್ ಕಡಲಗಾಲುವೆ ಈಜಿ ದಡವನ್ನು ಸೇರಿದೆ.

ಆದರೂ ಇಂಗ್ಲಿಷಿನಿಂದ ಮುಜುಗರ ಆಗುವುದು ತಪ್ಪಲಿಲ್ಲ. ಬ್ರಾಹ್ಮಣ ಬೀದಿಯಿಂದ ಬರುತ್ತಿದ್ದ ನನ್ನ ಸಹಪಾಠಿ ಸತೀಶ. ಆತನ ತಂದೆ ಶಾಲಾ ಶಿಕ್ಷಕರು. ಅಣ್ಣಂದಿರು ಗುಮಾಸ್ತರು. ಮನೆಗೆ ಇಂಗ್ಲಿಷ್ ಪತ್ರಿಕೆ ತರಿಸುತ್ತಿದ್ದರು. ಅವನಿಗೆ ಇಂಗ್ಲಿಷಿನಲ್ಲಿ ಹೆಚ್ಚು ಅಂಕ ಬರುತ್ತಿದ್ದವು. ಅಂತಹವರ ಜತೆಯಲ್ಲಿದ್ದರೆ ಇಂಗ್ಲಿಷ್ ಬರುತ್ತದೆಯೆಂದು ನಾವು ಅವನ ಹಿಂಬಾಲಕರಾಗಿದ್ದೆವು. ಈ ಕಾರಣಕ್ಕೆ ಅವನು ನಮ್ಮ ಮೇಲೆ ಸವಾರಿ ಮಾಡುತ್ತಿದ್ದನು. ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾದ ಬಳಿಕ ಕೆಲಸದ ಅರ್ಜಿ ತುಂಬಿಸಲು ನಾನು ಸತೀಶನ ಮನೆಗೆ ಹೋದೆ. ಅವನು ನನ್ನ ಹೆಸರು ತುಂಬಿದ ಬಳಿಕ 'ನಿನ್ನ ಡೆಟ್ ಆಫ್ ಬರ್ತ್ ಹೇಳು' ಎಂದ. ಕನ್ನಡದಲ್ಲಿ ಹೇಳಿದೆ.

ಇಂಗ್ಲಿಷ್ ಇಂಗ್ಲಿಷ್ ಎಂದ. 'ನೈಂಟೀನ್ ತೌಸಂಡ್ ನೈನ್ ಹಂಡ್ರೆಡ್ ಫಿಫ್ಟಿನೈನ್ ಎಂದೆ. ಅವನಿಗೆ ಸಟ್ಟನೆ ರೇಗಿತು. 'ಲೊ, ಒನ್ ತೌಸಂಡ್ ನೈನ್ ಹಡ್ರೆಡ್ ಫಿಫ್ಟಿನೈನ್ ಅನ್ನು. ಇಲ್ಲದಿದ್ದರೆ ನೈಂಟೀನ್ ಹಂಡ್ರೆಡ್ ಫಿಫ್ಟಿನೈನ್ ಅನ್ನು. ನೈಂಟೀನ್ ತೌಸಂಡಂತೆ ನೈಂಟೀನ್ ಥೌಸಂಡು. ನನ್ನ ಮಕ್ಕಳಾ, ನಿಮ್ಮಂಥೋರಿಂದಲೇ ದೇಶ ಇಷ್ಟು ಹಿಂದುಳಿದಿರೋದು' ಎಂದು ಸಿಡುಕಿದನು. ನಾನು ಅವನ ಆಪಾದನೆಗೆ ಸಮ್ಮತಿ ಸೂಚಿಸಿದೆ.

ಪಿಯುಸಿಯಲ್ಲಿ ಧ್ರುವಕುಮಾರ್ ಎನ್ನುವ ಆಂಗ್ಲ ಅಧ್ಯಾಪಕರಿದ್ದರು. ಅವರು ಕಲ್ಲುಬೊಂಬೆಗಳಂತೆ ಕೂತು ಅರ್ಥವಾಗದೆ ಮುಖವನ್ನೇ ನೋಡುತ್ತಿದ್ದ ನಮ್ಮಲ್ಲಿ ಒಬ್ಬರನ್ನು ಎಬ್ಬಿಸಿ ಪಾಠದಲ್ಲಿ ಬಂದ ಯಾವುದಾದರೂ ಒಂದು ಶಬ್ದ ಹೇಳಿ ಅರ್ಥ ಕೇಳುತ್ತಿದ್ದರು. ನಾವು ನೆಟ್ಟಕಂಬದಂತೆ ಸುಮ್ಮನೆ ನಿಲ್ಲುತ್ತಿದ್ದೆವು. 'ನಿಮ್ಮಂತಹ ಬೃಹಸ್ಪತಿಗಳಿಗೆ ಪಾಠ ಮಾಡಬೇಕಲ್ಲ ನನ್ನ ಕರ್ಮಕರ್ಮ ಎಂದು ಹಣೆ ಚಚ್ಚೆಕೊಳ್ಳುತ್ತಿದ್ದರು. ಹಾಗೆ ಚಚ್ಚಿಕೊಂಡು ಅವರ ಮುಂಭಾಗದ ಕೂದಲುಗಳೆಲ್ಲ ಉದುರಿ ಹಣೆ ವಿಶಾಲವಾಗಿ ಹಿಂಜರಿದಿತ್ತು. ಬ್ರಿಟಿಷರು ಭಾರತಕ್ಕೆ ಬಾರದಿದ್ದರೆ, ಗುರುಗಳ ತಲೆ ಹೀಗಾಗುತ್ತಿರಲಿಲ್ಲ. ಒಮ್ಮೆ ಗುರುಗಳು ಪಾಠದಲ್ಲಿ ಬಂದ ಬ್ರಿಕ್ಸ್ ಶಬ್ದದ ಅರ್ಥವೇನೆಂದು ನನಗೆ ಕೇಳಿದರು. ಜೀವನದಲ್ಲೇ ಕೇಳಿರದ ಶಬ್ದ. ಬ್ರೆಡ್ಡಿನ ಆಸುಪಾಸಿನ ಯಾವುದಾದರೂ ತಿನಿಸು ಇರಬಹುದೆಂದು-ನಾನು ಆದಿನ ಉಂಡು ಬಂದಿರಲಿಲ್ಲ-ಘಂಟಾಘೋಷದಲ್ಲಿ ನುಡಿದೆ:

"ಇಂಗ್ಲೆಂಡಿನ ತಿಂಡಿಯ ಹೆಸರು ಸಾ"

"ಆಹಾ! ಒಂದು ಇಟ್ಟಿಗೆ ತಗೊಂಬರ್ರೊ. ನನ್ನ ತಲೇನ ಚಚ್ಕೋತೀನಿ. ತಮಗೆ ಟೆಂತಲ್ಲಿ ಎಷ್ಟೊ ಮಾರ್ಕೊ ಇಂಗ್ಲಿಷಿಗೆ?"

"ಮೂವತ್ತು ಸಾ"

"ಸರಿಯಾಗಿದೆ. ಕೂತುಕೋ. ಎದೆ ಸೀಳಿದರೆ ಎಬಿಸಿಡಿ ಇಲ್ಲ, ಬಂದು ಬಿಡ್ತಾವೆ ಕಾಲೇಜಿಗೆ"

ಗುರುಗಳ ವ್ಯಂಗ್ಯ ಭರ್ತ್ಸನೆಗಳಿಂದ ಸೂಜಿಮೊನೆಯಷ್ಟೂ ನಮಗೆ ದುಃಖ ಆಗುತ್ತಿರಲಿಲ್ಲ. ಆದರೆ ಇಂಗ್ಲಿಷ್ ತರಗತಿಯಲ್ಲಿ ಆಗುತ್ತಿದ್ದ ಅಪಮಾನ ನೀಗಲು ನಾವು ಕೆಲವರು ಸಂಘ ಮಾಡಿಕೊಂಡು, ನಮ್ಮೂರಲ್ಲಿದ್ದ ಮುರಳೀಧರ್ ಮೇಷ್ಟರ ಬಳಿ ಟ್ಯೂಶನ್‌ಗೆ ಹೋಗಲು ನಿರ್ಧರಿಸಿದೆವು. ಮುರಳೀಧರ್ ಶ್ರೇಷ್ಠ ಶಿಕ್ಷಕ. ಕಪ್ಪಗಿದ್ದರು. ನಕ್ಕರೆ ಮಿಂಚು ಬೆಳಗಿದಂತೆ ಚಂದದ ಹಲ್ಲುಸಾಲು. ನಿಗೂಢ ವ್ಯಕ್ತಿ. ಎಲ್ಲಿಂದ ಬಂದರೊ ನಮ್ಮೂರಿಗೆ, ಅವರ ಬಂಧುಗಳು ಯಾರೂ ಇರಲಿಲ್ಲ. ಒಬ್ಬರೇ ಮಹಡಿಯ ಮೇಲೆ ರೂಂ ಮಾಡಿಕೊಂಡು ಇರುತ್ತಿದ್ದರು. ಅವರ ಕಡೆ ನಮ್ಮೂರ ರಾಜಕಾರಣಿಗಳು, ಅಧಿಕಾರಿಗಳು ಗುಟ್ಟಾಗಿ ಬಂದು ರಾತ್ರಿಹೊತ್ತು ಇಂಗ್ಲಿಷ್ ಕಲಿಯುತ್ತಿದ್ದರೆಂದು ವದಂತಿಗಳಿದ್ದವು. ಅವರು ನಮಗೆ 'ಇಂಗ್ಲಿಷ್ ಬರಲ್ಲ ಅಂತ ದುಃಖ ಪಡಬೇಡಿ. ದೊಡ್ಡದೊಡ್ಡ ಮನುಷ್ಯರೇ ತಪ್ಪಾಗಿ ಮಾತಾಡೋದನ್ನು ಕೇಳಿದ್ದೇನೆ. ಒನ್ ಆಫ್ ದಿ ಮೆಂಬರ್ ಎಂದೇ ಹೇಳುತ್ತಾರೆ. ಅದು ಮೆಂಬರ‍್ಸ್ ಆಗಬೇಕು. ಇಂಗ್ಲೆಂಡಿನಲ್ಲಿ ಚಿಕ್ಕಮಕ್ಕಳು ಕೂಡ ಇಂಗ್ಲಿಷ್ ಮಾತಾಡ್ತಾರೆ ಅಂತ ಆಶ್ಚರ್ಯ ಪಡೋರಿದ್ದಾರೆ' ಎಂದೆಲ್ಲ ಹೇಳಿದರು. ಮುರಳೀಧರ್ ಕಡೆ ದಡ್ಡರು ಮಾತ್ರ ಹೋಗ್ತಾರೆ ಎಂಬ ಗ್ರಹಿಕೆ ಇದ್ದುದರಿಂದ, ಸಜ್ಜನರು ವೇಶ್ಯೆಯರ ಮನೆಗೆ ಕದ್ದುಹೋಗುವವರಂತೆ ನಾವು ಕತ್ತಲಾದ ಮೇಲಿನ ಟ್ಯೂಶನ್ನಿಗೆ ಹೋಗುತ್ತಿದ್ದೆವು. ಅವರು ಸರಳವಾದ ಸ್ಪೋಕನ್ ಇಂಗ್ಲಿಷ್‌ನ್ನು ಕಲಿಸಿದರು.

ಹಾಗೂ ಹೀಗೂ ಪಿಯುಸಿಯಲ್ಲಿ ಪಾಸಾಗಿ ಬಿಎಗೆ ಹೋದೆವು. ಬಿಎನಲ್ಲಿ ನಮಗೆ ಇಂಗ್ಲಿಷ್ ಪಠ್ಯಗಳಿಗಿಂತ ಹೆಚ್ಚಿನ ಕಷ್ಟ ಕೊಟ್ಟಿದ್ದು ಇಂಗ್ಲಿಷಿನ ಅನುವಾದ. ಕನ್ನಡ ಸಾಹಿತ್ಯದವರಿಗೆ ಹಡ್ಸನ್ನನ 'ಇಂಟ್ರೊಡಕ್ಷನ್ ಟು ದಿ ಲಿಟರೇಚರ್' ಪಠ್ಯವಾಗಿತ್ತು. ಅದರ ಕನ್ನಡಾನುವಾದದ ಹೆಸರು 'ಸಾಹಿತ್ಯ ಪ್ರವೇಶ'. ಸಾಹಿತ್ಯಕ್ಕೆ ಪ್ರವೇಶ ಕೊಡಬಾರದು ಎಂಬ ಕಾರಣದಿಂದಲೇ ಅದನ್ನು ಇಟ್ಟಿದ್ದರೆಂದು ಕಾಣುತ್ತದೆ. ಅಲ್ಲಿದ್ದ ನಿದರ್ಶನಗಳೆಲ್ಲ ಆಂಗ್ಲ ಸಾಹಿತ್ಯದವು. ಸಾಮಾಜಿಕ ಚಾರಿತ್ರಿಕ ಸನ್ನಿವೇಶ ಇಂಗ್ಲೆಂಡಿನದು. ಅಲ್ಲಿದ್ದ ವಿಚಾರಗಳು ನಮ್ಮ ಒಳಗೆ ಹೋಗದೆ ಹೊರಗೇ ಉಳಿದವು. ಹಳೆಯ ಇಂಗ್ಲಿಷಿನಲ್ಲೇ ಪಾಠಕೇಳಿದ 'ಮ್ಯಾಕ್‌ಬೆತ್' ಹುಟ್ಟಿಸಿದಷ್ಟು ಆಸಕ್ತಿ ಹಡ್ಸನ್ನನ ಅನುವಾದ ಹುಟ್ಟಿಸಲಿಲ್ಲ.

ಎಂಎನಲ್ಲಿ ನಮಗೆ ಆಶ್ಚರ್ಯ ಕಾದಿತ್ತು. ಕನ್ನಡ ಪ್ರಾಧ್ಯಾಪಕರು ಬಹಳ ಚೆನ್ನಾಗಿ ಇಂಗ್ಲಿಷ್ ಓದಿಕೊಂಡಿದ್ದರು. ಇಂಗ್ಲಿಷಿನಲ್ಲಿ ಮಾತಾಡಲು ಬರೆಯಲು ಬಾರದೆ ಹೋದರೂ ಚಿಂತೆಯಿಲ್ಲ, ಕನ್ನಡ ಸಾಹಿತ್ಯ ಅರ್ಥಮಾಡಿಕೊಳ್ಳಲು, ಇಂಗ್ಲಿಷ್‌ನ್ನು ಓದಿ ಅರ್ಥಮಾಡಿಕೊಳ್ಳುವುದು ಮುಖ್ಯವೆಂದು ತಿಳಿಯಿತು. ಕುವೆಂಪು ಅವರ 'ನಮಗೆ ಬೇಕಾದ ಇಂಗ್ಲಿಷ್' ಲೇಖನದ ತರ್ಕ

ಹಿಡಿಸಿತ್ತು. ಎಂಎನಲ್ಲಿ ವರ್ಡ್ಸ್‌ವರ್ತನ 'ಲಿರಿಕಲ್ ಬ್ಯಾಲಡ್ಸ್' ಸಂಕಲನದ ಪ್ರಸ್ತಾವನೆಯನ್ನು ಇಡಲಾಗಿತ್ತು. ಟಿ.ಎಸ್.ಎಲಿಯಟನ 'ಟ್ರೆಡಿಶನ್ ಅಂಡ್ ಇಂಡಿವಿಷ್ಯುಯಲ್ ಟೇಲೆಂಟ್' ಕೂಡ ಇತ್ತು. ಇವನ್ನು ಪ್ರಭುಶಂಕರ ಹಾಗೂ ಜಿ.ಎಚ್.ನಾಯಕರು ಮಾಡುತ್ತಿದ್ದರು. ಇವರು ಈ ಆಂಗ್ಲ ಕವಿಗಳ ಚಿಂತನೆಗಳನ್ನು ಕನ್ನಡ ಸಾಹಿತ್ಯದ ನಿದರ್ಶನಗಳಿಗೆ ಲಗತ್ತಿಸಿ ಪಾಠ ಮಾಡಿದರು. ಚೆನ್ನಾಗಿ ಅರ್ಥವಾಯಿತು.

ಎಷ್ಟೇ ಕಷ್ಟಪಟ್ಟು ಇಂಗ್ಲಿಷ್ ಕಲಿತರೂ, ತಪ್ಪಾದ ವಾಕ್ಯರಚಿಸಿ ಶಬ್ದ ಬಳಸಿ, ಅಯ್ಯೋ ಹೀಗಾಯಿತಲ್ಲ ಎಂಬ ಪರಿತಾಪ ತಪ್ಪಲಿಲ್ಲ. ನಮ್ಮಂಥದ್ದೇ ಕಷ್ಟ ಮೇಲರಿಮೆ ಕೀಳರಿಮೆಯನ್ನು ಫ್ರೆಂಚ್ ವಿಷಯದಲ್ಲಿ ರಷ್ಯನ್ನರು ಪಟ್ಟಿರುವುದು ಟಾಲ್‌ಸ್ಟಾಯ್ ಓದುವಾಗ ತಿಳಿದು ಸಮಾಧಾನವಾಯಿತು. ಮುಂದೆ ಪಾಟೀಲ ಪುಟ್ಟಪ್ಪನವರು 'ತರಂಗ'ದಲ್ಲಿ ಇಂಗ್ಲಿಷಿನ ದುರವಸ್ಥೆ ಎಂಬ ಲೇಖನ ಬರೆದಾಗ ನನಗೆ ಕೋಪ ಬಂತು. ಅದರಲ್ಲಿ ಕನ್ನಡಿಗರು ಆಂಗ್ಲಭಾಷೆಯಲ್ಲಿ ತಪ್ಪಾಡುವ ನಿದರ್ಶನಗಳನ್ನೆಲ್ಲ ಕೊಟ್ಟು ತಮಾಷೆ ಮಾಡಲಾಗಿತ್ತು. ನಾನು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾದವರು ಇಂಗ್ಲಿಷಿನ ಪಾವಿತ್ರ್ಯ ರಕ್ಷಣೆಗೆ ಇಷ್ಟೊಂದು ತಲೆ ಕೆಡಿಸಿಕೊಳ್ಳುವುದು ಬೌದ್ಧಿಕ ಗುಲಾಮಗಿರಿಯ ಸಂಕೇತವೆಂದು ಪತ್ರ ಬರೆದೆ. ಅದೇ ಕಾಲಕ್ಕೆ ಕೀನ್ಯಾದಲ್ಲಿ ಇಂಗ್ಲಿಷು ಶಿಕ್ಷಣ ಮಾಧ್ಯಮದಲ್ಲಿ ಸೃಷ್ಟಿಸಿದ ಭಯೋತ್ಪಾದನೆ ಕುರಿತ ಚಿಂತನೆಯುಳ್ಳ ಗೂಗಿಯ 'ಡಿಕಲೊನೈಜಿಂಗ್ ದಿ ಮೈಂಡ್' ಕೃತಿಯನ್ನು ತರ್ಜುಮೆ ಮಾಡಿದೆ. ಅದು ನಮ್ಮದೇ ಕಷ್ಟಸುಖಗಳ ಕಥೆಯೆನಿಸಿತ್ತು. ಕನ್ನಡ ಮಾಧ್ಯಮದಲ್ಲಿ ಓದಿದರೂ ನಮ್ಮ ಮಕ್ಕಳು ಒಳ್ಳೇ ಅಂಗ್ರೇಜಿ ಗಳಿಸಿದರು. ನನ್ನ ತಲೆಮಾರಿಗೆ ಸಿಗದ ವಾತಾವರಣದಲ್ಲಿ ಅವರು ಬೆಳೆದರು. ಅವರು ಆಗಾಗ್ಗೆ ನನ್ನ ಮತ್ತು ಬಾನುವಿನ ಅಂಗ್ರೇಜಿಯನ್ನು ಮೃದುವಾಗಿ ತಿದ್ದುತ್ತಾರೆ. ನಮ್ಮ ಮೇಷ್ಟರುಗಳಂತೆ ತಲೆ ಚಚ್ಚಿಕೊಳ್ಳುವುದಿಲ್ಲ.