ಬೆಂಗಳೂರು ಬಳಿ ಶೈಕ್ಷಣಿಕ ನಗರ ನಿರ್ಮಾಣ: ಸಿಎಂ ಬೊಮ್ಮಾಯಿ

ಬೆಂಗಳೂರು: ಬೆಂಗಳೂರು ಬಳಿ ಶೈಕ್ಷಣಿಕ ನಗರ(ಜ್ಞಾನಾಧಾರಿತ ನಗರ) ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ನವೀಕೃತ ಆವರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ಬಳಿ 2000 ಎಕರೆ ಪ್ರದೇಶದಲ್ಲಿ ನಾಲೆಡ್ಜ್ ಸಿಟಿ ಮಾಡಲು ತೀರ್ಮಾನ ಮಾಡಲಾಗಿದೆ. ಅಲ್ಲಿ ಜಗತ್ತಿನ ಎಲ್ಲ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಬರುವಂತಾಗಬೇಕು. ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳು, ದೇಶ-ವಿದೇಶಗಳ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಂಶೋಧನೆ ಮಾಡಬಹುದು. ಹಾಗೆಯೇ ಅತ್ಯುತ್ತಮ ಶಿಕ್ಷಣವನ್ನು ಪಡೆಯಬಹುದು ಎಂದರು.
ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಆರು ವಿಶ್ವವಿದ್ಯಾಲಯಗಳು ಇವೆ. ಹೀಗಾಗಿ ಹೊಸ ಶೈಕ್ಷಣಿಕ ಜಿಲ್ಲೆಯನ್ನು ಪೋಷಣೆ ಮಾಡಲಾಗಿದ್ದು, ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ವಿದ್ಯಾರ್ಥಿಗಳು ತಮಿಗಿಷ್ಟವಿರುವ ವಿಷಯವನ್ನ ಅಭ್ಯಸಿಸಬಹುದು. ಬಹುಶಿಸ್ತೀಯ ವಿಷಯಗಳನ್ನು ಆಯ್ಕೆ ಮಾಡಲು ಆಕಾಶವಿದೆ ಎಂದು ತಿಳಿಸಿದರು.
ಈ ವಿಶ್ವ ವಿದ್ಯಾಲಯ ಅತ್ಯಂತಮಹತ್ವದ್ದಾಗಿದೆ. ಈ ವಿಶ್ವ ವಿದ್ಯಾಲಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದ್ದೇವೆ. ಹೊಸ ಶಿಕ್ಷಣ ನೀತಿಯಿಂದ ಸಾಕಷ್ಟು ಅನುಕೂಲವಾಗಿದೆ. ರಾಷ್ಟ್ರೀಯ ಜಾರಿಗೆ ತಂದಿರುವ ಮೊದಲ ರಾಜ್ಯ ಕರ್ನಾಟಕ ಎಂದರು.
ಈ ಯೋಜನೆಗೆ ಯುವಕರಿಂದ ಸಾಕಷ್ಟು ಉತ್ಸಾಹ ಮೂಡಿದೆ. ಈಗ ಬದಲಾದ ಪದ್ದತಿಯಲ್ಲಿ ವಿದ್ಯಾರ್ಥಿಗಳು ಕಲೆಯಿಂದ ವಿಜ್ಞಾನ, ವಿಜ್ಞಾನದಿಂದ ವಾಣಿಜ್ಯ ಕಲಿಯಬಹುದು. ಇದೊಂದು ರೀತಿಯಲ್ಲಿ ಹೊಸ ಪ್ರಯೋಗ ಎಂದು ತಿಳಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಇತಿಹಾಸವಿರುವ ಸಂಸ್ಥೆ ಇದು. ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಲವರು ಬಹಳ ದೊಡ್ಡ ಸಾಧನೆ ಮಾಡಿದ್ದಾರೆ. ಅಂತಹವರ ಸಾಲಿಗೆ ಇನ್ನಷ್ಟು ವಿದ್ಯಾರ್ಥಿಗಳು ಸೇರುವಂತಾಗಲಿ ಎಂದು ಆಶಿಸಿದರು. ಬೆಂಗಳೂರು ನಗರ ವಿಶ್ವ ವಿದ್ಯಾಲಯ ಅದ್ಭುತ ಸ್ಥಳದಲ್ಲಿದೆ. ವಿದ್ಯಾರ್ಥಿಗಳ ಸ್ನೇಹಿಯಾಗಿ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಲಿಂಗರಾಜಗಾಂಧಿ, ಕುಲಸಚಿವ(ಆ) ಸಿ.ಎನ್.ಶ್ರೀಧರ, ಕುಲಸಚಿವ(ಮೌ) ಡಾ.ವಿ.ಲೋಕೇಶ, ವಿತ್ತಾಧಿಕಾರಿ ರಘು ಜಿ.ಪಿ. ಮತ್ತಿತರರು ಉಪಸ್ಥಿತರಿದ್ದರು.