ಆ ಒಬ್ಬ ಆಟಗಾರನನ್ನು ಕಡೆಗಣಿಸಿದ್ದಕ್ಕೆ ಆಡಂ ಗಿಲ್‌ಕ್ರಿಸ್ಟ್ ಕೆಂಡಾಮಂಡಲ!

ಆ ಒಬ್ಬ ಆಟಗಾರನನ್ನು ಕಡೆಗಣಿಸಿದ್ದಕ್ಕೆ ಆಡಂ ಗಿಲ್‌ಕ್ರಿಸ್ಟ್ ಕೆಂಡಾಮಂಡಲ!

ದೆಹಲಿ ಟೆಸ್ಟ್ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಸವಾಲಿನ ಪ್ರದರ್ಶನ ನೀಡಿದ ಹೊರತಾಗಿಯೂ ದಿಢೀರ್ ಕುಸಿತಕ್ಕೆ ಒಳಗಾದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಹೀನಾಯ ಪ್ರದರ್ಶನ ನೀಡಿ ಭಾರತಕ್ಕೆ ಸುಲಭ ಸವಾಲಾಯಿತು.

ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಮತ್ತೊಮ್ಮೆ ಆಸ್ಟ್ರೇಲಿಯಾಗೆ ದುಃಸ್ವಪ್ನವಾಗಿ ಕಾಡಿದ್ದಾರೆ.

ಈ ಕಳಪೆ ಪ್ರದರ್ಶನದ ಬಳಿಕ ಆಸ್ಟ್ರೇಲಿಯಾ ತಂಡದ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಮಾಜಿ ಆಟಗಾರ ಆಡಂ ಗಿಲ್‌ಗ್ರಿಸ್ಟ್ ಕೂಡ ಆಸ್ಟ್ರೇಲಿಯಾ ತಂಡದ ಪ್ರದರ್ಶನದ ವಿರುದ್ಧ ಅಸಾಮಾಧಾನ ವ್ಯಕ್ತಪಡಿಸಿದ್ದು ತಂಡದ ಆಯ್ಕೆಯ ವಿಚಾರವಾಗಿ ಕೆಂಡಕಾರಿದ್ದಾರೆ. ಅದರಲ್ಲೂ ತಂಡದ ಪ್ರಮುಖ ಸ್ಪಿನ್ನರ್ ಎನಿಸಿರುವ ಆಶ್ಟನ್ ಅಗರ್ ಅವರನ್ನು ಆಡುವ ಬಳಗದಿಂದ ಹೊರಗಿಡುವ ನಿರ್ಧಾರಕ್ಕೆ ಗಿಲ್‌ಕ್ರಿಸ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ


ಆಡಂ ಗಿಲ್‌ಕ್ರಿಸ್ಟ್ ಕೆಂಡ

ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆಶ್ಟನ್ ಅಗರ್ ಅವರಿಗೆ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶ ದೊರೆಯದ ಬಗ್ಗೆ ಗಿಲ್‌ಕ್ರಿಸ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಸ್ಪಿನ್ನರ್ ಆಶ್ಟನ್ ಅಗರ್‌ಗೆ ಮಾಡಿದ ದೊಡ್ಡ ಅವಮಾನ ಎಂದು ಗಿಲ್‌ಕ್ರಿಸ್ಟ್ ಹೇಳಿಕೆ ನೀಡಿದ್ದು ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಶ್ಟನ್ ಅಗರ್ ಬದಲಿಗೆ ಮೊದಲ ಎರಡು ಪಂದ್ಯಗಳಲ್ಲಿ ಟಾಡ್ ಮರ್ಫಿಗೆ ಅವಕಾಶ ನೀಡಲಾಗಿತ್ತು.

ಆಶ್ಟನ್ ಅಗರ್‌ಗೆ ದೊಡ್ಡ ಅವಮಾನ

ಭಾರತದ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿಯೂ ಅವಕಾಶ ನೀಡದೆ ಇದ್ದಿದ್ದು ಆಶ್ಟನ್ ಅಗರ್‌ಗೆ ಮಾಡಿದ ದೊಡ್ಡ ಅವಮಾನ ಎಂದಿದ್ದಾರೆ ಗಿಲ್‌ಕ್ರಿಸ್ಟ್. "ಇದು ಬಹಳ ದೊಡ್ಡ ಅವಮಾನವಾಗಿದೆ. ಪ್ರವಾಸಗಳನ್ನು ಕೈಗೊಂಡಾಗ ದೊಡ್ಡ ಸರಣಿಗಳಲ್ಲಿ ಕಣಕ್ಕಿಳಿಯುವಾಗ ಮೊದಲಿಗೆ ಮೀಸಲಾಗಿರುವ ಆಟಗಾರರನ್ನು ಆಯ್ಕೆ ಮಾಡುವುದು ಸಹಜ. ಹಾಗೆಯೇ ಮಾಡಬೇಕಿದೆ. ಆದರೆ ಆಸ್ಟ್ರೇಲಿಯಾ ತಂಡದಲ್ಲಿ ಹಾಗೆ ಆಗಿಲ್ಲ" ಎಂದಿದ್ದಾರೆ ಆಡಂ ಗಿಲ್‌ಕ್ರಿಸ್ಟ್. ಈ ಮೂಲಕ ಆಶ್ಟನ್ ಅಗರ್‌ಗೆ ಅರ್ಹತೆಯಿದ್ದರೂ ಕಡೆಗಣನೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರಣಿ ಸೋಲಿನ ಸನಿಹ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ತಂಡ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿಯೂ ಹೀನಾಯ ಪ್ರದರ್ಶನ ನೀಡುವ ಮೂಲಕ ಭಾರೀ ಸೋಲು ಕಂಡು ಆಘಾತಕ್ಕೆ ಒಳಗಾಗಿದೆ. ನಾಗ್ಪುರ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಹಾಗೂ 132 ರನ್‌ಗಳ ಅಂತರದ ಹೀನಾಯ ಸೋಲು ಕಂಡರೆ ದೆಹಲಿ ಟೆಸ್ಟ್‌ನಲ್ಲಿ 6 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿದೆ. ಹೀಗಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಈಗಾಗಲೇ ಹಿನ್ನಡೆಯಲ್ಲಿದೆ. ಮುಂದಿನ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದರೆ ಮಾತ್ರ ಈ ಸರಣಿಯಲ್ಲಿ ಸಮಬಲಗೊಳಿಸುವ ಅವಕಾಶ ಆಸ್ಟ್ರೇಲಿಯಾ ಮುಂದಿದೆ.