ಅಮಿತ್ ಶಾ `HAL' ಗೆ ತೆರಳುವ ವೇಳೆ ಭದ್ರತಾ ಲೋಪ : 300 ಮೀಟರ್ ಹಿಂಬಾಲಿಸಿದ ಬೈಕ್ ಸವಾರರು

ಬೆಂಗಳೂರು : ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿನ್ನೆ ಹೆಚ್ ಎಎಲ್ ಗೆ ತೆರಳುವಾಗ ಭದ್ರತಾ ಲೋಪವಾಗಿದ್ದು, ಇಬ್ಬರು ಬೈಕ್ ಸವಾರರು ಅಮಿತ್ ಶಾ ಬೆಂಗಾವಲು ವಾಹನದ ಹಿಂದೆ ಹೋಗಿರುವ ಘಟನೆ ನಡೆದಿದೆ.
ಅಮಿತ್ ಶಾ ಅವರು ತಾಜ್ ವೆಸ್ಟ್ ಎಂಡ್ ನಿಂದ ಹೆಚ್ ಎಎಲ್ ಗೆ ತೆರಳುತ್ತಿದ್ದ ವೇಳೆ ಸಫೀನಾ ಫ್ಲಾಜಾದಿಂದ ಬೆಂಗಾವಲು ವಾಹನದ ಹಿಂದೆ ಇಬ್ಬರು ಬೈಕ್ ಸವಾರರು ಹಿಂಬಾಲಿಸಿದ್ದಾರೆ. ಸುಮಾರು 300 ಮೀಟರ್ ವರೆಗೆ ಅಂದರೆ ಮಣಿಪಾಲ ಸೆಂಟರ್ ವರೆಗೆ ಇಬ್ಬರು ಬೈಕ್ ಸವಾರರು ಹಿಂಬಾಲಿಸಿದ್ದಾರೆ.
ಕೂಡಲೇ ಇಬ್ಬರು ಬೈಕ್ ಸವಾರರನ್ನು ವಶಕ್ಕೆ ಪಡೆದ ಪೊಲೀಸರು ರಾತ್ರಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಬೈಕ್ ಸವಾರರು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಸಿದ್ಧತೆ ಭರದಿಂದ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯಕ್ಕೆ ನಿನ್ನೆ ಚುನಾವಣಾ ಚಾಣಕ್ಯ ಅಮಿತ್ ಶಾ ಭೇಟಿ ನೀಡಿದ್ದು, ಬಸವಕಲ್ಯಾಣದಲ್ಲಿ ಹುತಾತ್ಮರ ಸ್ಮಾರಕ ಲೋಕಾರ್ಪಣೆ ಮಾಡಿದ್ದಾರೆ.