ಅಪರೇಷನ್ ಕಮಲವನ್ನು ಕಾನೂನುಬದ್ಧಗೊಳಿಸಲು 'ಒಂದು ದೇಶ ಒಂದು ಚುನಾವಣೆ': ಎಎಪಿ
ನವದೆಹಲಿ: ಕೇಂದ್ರದ ಮೋದಿ ಸರ್ಕಾರದ 'ಏಕದೇಶ ಏಕ ಚುನಾವಣೆ' ಪ್ರಸ್ತಾಪವನ್ನು ಆಮ್ ಆದ್ಮಿ ಪಕ್ಷವು ತಿರಸ್ಕರಿಸಿದೆ. ಇದು ಅಪರೇಷನ್ ಕಮಲದಡಿ ಶಾಸಕರ ಮಾರಾಟವನ್ನು ಕಾನೂನುಬದ್ಧಗೊಳಿಸುವ ಬಿಜೆಪಿಯ ತಂತ್ರ ಎಂದು ಅದು ಹೇಳಿದೆ.
ನರೇಂದ್ರ ಮೋದಿ ಅವರು ಪ್ರಸ್ತಾಪ ಮಾಡುತ್ತಿರುವ ಚುನಾವಣೆ ಪ್ರಕ್ರಿಯೆಯು ಸಂಸದೀಯ ಮಾದರಿಯ ಸರ್ಕಾರವನ್ನು ತೆಗೆದುಹಾಕಿ ಅಧ್ಯಕ್ಷ ಪದ್ಧತಿಯನ್ನು ಜಾರಿಗೆ ತರುವ ಹುನ್ನಾರ ಎಂದು ಎಎಪಿ ಕಿಡಿಕಾರಿದೆ.
'ಶ್ರೀಮಂತ ಪಕ್ಷಗಳು ತಮ್ಮ ಹಣ ಹಾಗೂ ತೋಳು ಬಲದಿಂದ ದೇಶದ ಸಮಸ್ಯೆಗಳನ್ನು ಮುಚ್ಚಿಹಾಕುತ್ತವೆ. ಒಂದು ವೇಳೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆದರೆ ಮತದಾರರ ನಿರ್ಧಾರ ಬದಲಾಗಲಿದೆ' ಎಂದು ಪಕ್ಷದ ವಕ್ತಾರೆ ಅತಿಶಿ ಅವರು ಹೇಳಿದ್ದಾರೆ.
'ಒಂದು ದೇಶ ಒಂದು ಚುನಾವಣೆ ಪ್ರಸ್ತಾಪವನ್ನು ಎಎಪಿ ಪಕ್ಷವು ತೀವ್ರವಾಗಿ ವಿರೋಧಿಸುತ್ತದೆ. ಇದು ಸಂವಿಧಾನ ಬಾಹಿರ ಹಾಗೂ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ವಿರುದ್ಧವಾದು. ಈ ಪ್ರಸ್ತಾಪವು ಅಪರೇಷನ್ ಕಮಲ ಮೂಲಕ ಶಾಸಕರ ವ್ಯಾಪಾರ ಕಾನೂನುಬದ್ಧಗೊಳಿಸುವ ಹುನ್ನಾರ' ಎಂದು ಅವರು ಹೇಳಿದ್ದಾರೆ.
ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತು ಅಭಿಪ್ರಾಯ ಬಯಸಿ ವಿವಿಧ ರಾಜಕೀಯ ಪಕ್ಷಗಳು, ಚುನಾವಣಾ ಆಯೋಗಕ್ಕೆ ಕಾನೂನು ಆಯೋಗವು ಪತ್ರ ಬರೆದಿತ್ತು. ಈ ಬಗ್ಗೆ ಅತಿಶಿ ಪ್ರತಿಕ್ರಿಯೆ ನೀಡಿದ್ದಾರೆ.