ಅದಾನಿ ಸಮೂಹಕ್ಕೆ ಸಾಲ ದೊಡ್ಡ ಮಟ್ಟದಲ್ಲಿಲ್ಲ: ಆರ್‌ಬಿಐ ಡೆಪ್ಯುಟಿ ಗವರ್ನರ್

ಮುಂಬೈ: ದೇಶಿ ಬ್ಯಾಂಕ್‌ಗಳು ಅದಾನಿ ಸಮೂಹಕ್ಕೆ ನೀಡಿರುವ ಸಾಲದ ಮೊತ್ತವು 'ಬಹಳ ದೊಡ್ಡದೇನೂ ಅಲ್ಲ' ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ.ಕೆ. ಜೈನ್ ಹೇಳಿದ್ದಾರೆ.
ಅದಾನಿ ಸಮೂಹಕ್ಕೆ ಬ್ಯಾಂಕ್‌ಗಳು ನೀಡಿರುವ ಸಾಲದ ವಿಚಾರವಾಗಿ ಆರ್‌ಬಿಐ ಮಾರ್ಗದರ್ಶನ ನೀಡಲಿದೆಯೇ ಎಂಬ ಪ್ರಶ್ನೆಗೆ ಜೈನ್ ಅವರು ಈ ಉತ್ತರ ನೀಡಿದ್ದಾರೆ.
'ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಶಕ್ತಿ, ಗಾತ್ರ ಮತ್ತು ಸ್ಥಿತಿಸ್ಥಾಪಕತ್ವ ಗುಣವು ಈಗ ಬೃಹತ್ ಆಗಿ ಬೆಳೆದಿದೆ. ಅದು ಯಾವುದೇ ಒಂದು ಘಟನೆಯಿಂದ ತೊಂದರೆಗೆ ಒಳಗಾಗದು' ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಬ್ಯಾಂಕ್‌ಗಳು ಯಾವುದೇ ಕಂಪನಿಯ ಮಾರುಕಟ್ಟೆ ಬಂಡವಾಳವನ್ನು ಗಮನಿಸಿ ಸಾಲ ಕೊಡುವ ತೀರ್ಮಾನ ಕೈಗೊಳ್ಳುವುದಿಲ್ಲ. ಕಂಪನಿಯ ಆರ್ಥಿಕ ಸ್ಥಿತಿ, ನಗದು ಹರಿವಿನ ಅಂದಾಜು ಮತ್ತು ಇತರ ಅಂಶಗಳನ್ನು ಆಧರಿಸಿ ತೀರ್ಮಾನ ಕೈಗೊಳ್ಳುತ್ತವೆ ಎಂದು ದಾಸ್ ತಿಳಿಸಿದ್ದಾರೆ.