ಸೇಡಂ: ವೈಷ್ಣವಿ ಪ್ರಾಮಾಣಿಕತೆಗೆ ಬಿಇಒ, ಪಿಎಸ್‌ಐ ಅಭಿನಂದನೆ

ಸೇಡಂ: ರಸ್ತೆಯಲ್ಲಿ ದೊರೆತ 7 ತೊಲಿ ಚಿನ್ನಾಭರಣ ಮತ್ತು ಮೊಬೈಲ್ ಒಳಗೊಂಡ ಚೀಲವನ್ನು ಸಂಬಂಧಪಟ್ಟವರಿಗೆ ಹಿಂದುರಿಗಿಸಿದ ವಿದ್ಯಾರ್ಥಿನಿ ವೈಷ್ಣವಿ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ, ಕ್ಷೇತ್ರಶಿಕ್ಷಣಾಧಿಕಾರಿ ನಾಗಪ್ಪ ಪೋತಲ್ ಮತ್ತು ಪಿಎಸ್‌ಐ ಅಯ್ಯಪ್ಪ ಧರ್ಮಾವರಂ ಅವರು ಮಂಗಳವಾರ ವಿದ್ಯಾರ್ಥಿನಿ ಹಾಗೂ ಪಾಲಕರನ್ನು ಸನ್ಮಾನಿಸಿದರು.
ಪಟ್ಟಣದ ಕೋಮಿಟಿ ಗಲ್ಲಿಯ ನಿವಾಸಿ ಭೀಮಾಶಂಕರ ಚನ್ನಕ್ಕಿ ಅವರ ಪುತ್ರಿ ವೈಷ್ಣವಿಗೆ ಭಾನುವಾರ ರಸ್ತೆಯಲ್ಲಿ ಚಿನ್ನಾಭರಣದ ಚೀಲ ದೊರೆತಿತ್ತು. ಅದರಲ್ಲಿದ್ದ ಮೊಬೈಲ್ ಮೂಲಕ ಸಂಬಂಧಿಕರನ್ನು ಸಂಪರ್ಕಿಸಿ ಚೀಲ ಮರಳಿಸಿದ್ದರು. ಬಗ್ಗೆ 'ಪ್ರಜಾವಾಣಿ'ಯಲ್ಲಿ ಮಂಗಳವಾರ ಸುದ್ದಿ ಪ್ರಕಟವಾಗಿದ್ದನ್ನು ಕಂಡು, ಅಧಿಕಾರಿಗಳು ಅಭಿನಂದನೆ ಸಲ್ಲಿಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ನಾಗಪ್ಪ ಪೋತಲ್ ಮಾತನಾಡಿ, 'ಸೇಡಂನ ಸರ್ಕಾರ ಕನ್ಯಾಪ್ರೌಢಶಾಲೆಯಲ್ಲಿ 9ನೇ ತರಗತಿ ಓದಿತ್ತಿರುವ ವಿದ್ಯಾರ್ಥಿನಿಯ ನಡೆ ಎಲ್ಲ ಮಕ್ಕಳಿಗೂ ಮಾದರಿಯಾದದ್ದು. ₹ 4 ಲಕ್ಷದಷ್ಟು ವಸ್ತುಗಳನ್ನು ಅದರ ವಾರಸುದಾರರಿಗೆ ಮರಳಿಸುವ ಮೂಲಕ ವೈಷ್ಣವಿ, ನಮಗೂ ಹೆಮ್ಮೆ ತಂದಿದ್ದಾರೆ' ಎಂದರು.
'ವಿದ್ಯಾರ್ಥಿನಿ ಪೊಲೀಸ್ ಇಲಾಖೆಯ ಪ್ರೀತಿಗೆ ಪಾತ್ರವಾಗಿದ್ದಾರೆ. ಅಪರಾಧ ನಿಯಂತ್ರಣಕ್ಕೆ ಇಂಥ ದಿಟ್ಟ ಮನಸ್ಸುಗಳ ಸಹಕಾರ ಬೇಕು' ಎಂದರು.
ಪ್ರೌಢಶಾಲೆಯ ಉಪಪ್ರಾಚಾರ್ಯ ಸತ್ಯಕುಮಾರ ಬಾಗೋಡಿ, ಪೊಲೀಸ್ ಸಿಬ್ಬಂದಿ ಅಮೋಘ ಕಾಂಬಳೆ, ಮುಖಂಡ ದತ್ತಾತ್ರೇಯ ಐನಾಪೂರ, ಭೀಮಾಶಂಕರ ಚನ್ನಕ್ಕಿ, ವಿಠ್ಠಲರೆಡ್ಡಿ, ಶಿಕ್ಷಕ ಭೀಮಣ್ಣ ಶ್ರೀಕಾಂತ ಊಡಗಿ ಇದ್ದರು.