ಸರ್ಕಾರದ ವಿರುದ್ಧ ರೈತರ ಪಾದಯಾತ್ರೆ, ಕಾರಣ ಕೇಳಿದ್ರೇ ಶಾಕ್ ಆಗ್ತಿರಾ
ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನನ್ನು ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದನ್ನು ವಿರೋಧಿಸಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ರೈತರು ಪಾದಯಾತ್ರೆ ನಡೆಸಿದರು. ನರೇಂದ್ರ ಗ್ರಾಮದ ಮೆಳೆಪ್ಪಜ್ಜನ ಮಠದಿಂದ ರಾಷ್ಟ್ರೀಯ ಹೆದ್ದಾರಿ-4ರ ಮೂಲಕ ಕಾಯಕನಗರದವರೆಗೆ ಪಾದಯಾತ್ರೆ ಮೂಲಕ ತೆರಳಿ ಅಲ್ಲಿ ಖಂಡನಾ ಸಭೆ ನಡೆಸಿದರು. ಕೈಗಾರಿಕಾ ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ವಸತಿ ಬಡಾವಣೆ ನಿರ್ಮಾಣದ ಸಲುವಾಗಿ ನರೇಂದ್ರ ಮತ್ತು ಮುಮ್ಮಿಗಟ್ಟಿ ಗ್ರಾಮದ ಹದ್ದಿನಲ್ಲಿ ಬರುವ ಜಮೀನುಗಳನ್ನು 1994-95ರಲ್ಲಿ ಕೆ.ಐ.ಎ.ಡಿ.ಬಿ.ಯು ಸ್ವಾಧೀನಪಡಿಸಿಕೊಂಡಿದೆ. ಜಮೀನು ಸ್ವಾಧೀನದ ಸಂದರ್ಭದಲ್ಲಿ ಜಮೀನುಗಳ ಮಾಲೀಕರಾದ ರೈತರಿಗೆ ಪ್ರತಿ ಎಕರೆಗೆ 85 ಸಾವಿರ ರೂಪಾಯಿಗಳನ್ನು ಮಾತ್ರ ಪರಿಹಾರ ರೂಪದಲ್ಲಿ ಪಾವತಿಸಿದೆ. ಆಗಿನ ಸಂದರ್ಭದಲ್ಲಿನ ಮಾರುಕಟ್ಟೆ ದರವನ್ನು ನ್ಯಾಯಯುತವಾಗಿ ಸರ್ಕಾರ ಕೊಡಲಿಲ್ಲ. ಅಲ್ಲದೇ, ಕೈಗಾರಿಕೆಯ ಬೆಳವಣಿಗೆಗೆ ತಮ್ಮ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಪ್ರತಿಯೊಂದು ಕುಟುಂಬಕ್ಕೆ ಉದ್ಯೋಗ ಒದಗಿಸುವ ಭರವಸೆಯನ್ನು ಸಹ ಕೆ.ಐ.ಎ.ಡಿ.ಬಿ. ಅಧಿಕಾರಿಗಳು ನೀಡಿದ್ದರು. ಆದರೆ. ಇದುವರೆಗೂ ಜಮೀನಿನಲ್ಲಿ ಯಾವುದೇ ವಸ್ತು ಉತ್ಪಾದಿಸುವ ಮತ್ತು ಉದ್ಯೋಗ ಕಲ್ಪಿಸುವ ಕಂಪೆನಿ ಸ್ಥಾಪನೆಯಾಗಿಲ್ಲ. ಅಲ್ಲದೇ ಉದ್ಯಮಿಗಳಿಗೆ ಇದುವರೆಗೂ ವಸತಿ ನಿರ್ಮಿಸಿಲ್ಲ. ಆದರೆ, ಸ್ವಾಧೀನಪಡಿಸಿಕೊಂಡ 241 ಎಕರೆ ಜಮೀನಿನ ಪೈಕಿ 34 ಎಕರೆ ಜಮೀನನ್ನು ಖಾಸಗಿ ಒಡೆತನದ ಪ್ರಕಲ್ಪ ಹೊಟೇಲ್, ಪ್ರಕಲ್ಪ ಆಸ್ಪತ್ರೆ ಮತ್ತು ರಾಷ್ಟ್ರೋತ್ಥಾನ ಪರಿಷತ್ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದರು....ಈ ಜಮೀನಿನಲ್ಲಿ ಕೈಗಾರಿಕಾ ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ವಸತಿ ಬಡಾವಣೆ ನಿರ್ಮಿಸಿದರೆ ಅನೇಕರಿಗೆ ಅನುಕೂಲ ಆಗುತ್ತಿತ್ತು. ಸರ್ಕಾರ, ಕೆ.ಐ.ಎ.ಡಿ.ಬಿ.ಯ ಇಂತಹ ನಡೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯ, ಮೋಸ ಮಾಡಿದಂತಾಗಿದೆ ಜೊತೆಗೆ ಉದ್ಯಮಿಗಳಿಗೂ ವಂಚನೆಯಾಗುತ್ತಿದೆ. ಆದ್ದರಿಂದ ಜಮೀನು ಸ್ವಾಧೀನದ ಸಂದರ್ಭದಲ್ಲಿ ತಿಳಿಸಿದಂತೆ ಈ ಜಮೀನನಲ್ಲಿ ವಸತಿ ಬಡಾವಣೆ ನಿರ್ಮಿಸಬೇಕು. ಅದರ ಹೊರತು ಅನ್ಯ ಉದ್ದೇಶಕ್ಕೆ ಬಳಸುವುದಕ್ಕೆ ನಮ್ಮ ತೀವ್ರ ವಿರೋಧವಿದೆ. ಒಂದು ವೇಳೆ ಬಡಾವಣೆ ನಿರ್ಮಿಸದಿದ್ದರೆ ಸ್ವಾಧೀನಪಡಿಸಿಕೊಂಡ ಜಮೀನುಗಳನ್ನು ರೈತರಿಗೆ ಮರಳಿ ಕೊಡಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.ಆದರೆ, ಸರ್ಕಾರದಿಂದ ಇದುವರೆಗೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಇಂತಹ ಧೋರಣೆಗೆ ನಮ್ಮ ಧಿಕ್ಕಾರವಿದೆ. ಇದೇ ವೇಳೆ ಪ್ರತಿಪಕ್ಷಗಳ ಮುಖಂಡರು ಕೂಡ ಮೌನವಹಿಸಿರುವುದು ಅಚ್ಚರಿ ಮೂಡಿಸಿದೆ. ಕೂಡಲೇ ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.