ಹಾಕಿ ಉತ್ಸವʼ ಕಣ್ಮರೆಯಾಗುತ್ತಿರುವ ಕುಟುಂಬ ಸಂಬಂಧಗಳ ಮರುಸ್ಥಾಪನೆಗೆ ಸಹಾಯಕ: ಸಿಎಂ ಬೊಮ್ಮಾಯಿ

ಕೊಡಗು: 2022-23ನೇ ಸಾಲಿನ ಅಪ್ಪಾಚಟ್ಟೋಳಂಡ ಹಾಕಿ ಪಂದ್ಯಾವಳಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೌಟುಂಬಿಕ ಸಂಬಂಧಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಹಾಕಿ ಉತ್ಸವವು ಕುಟುಂಬ ಸಂಬಂಧಗಳನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಕೊಡವ ಕುಟುಂಬಗಳು ಆಯೋಜಿಸಿರುವ ಪಂದ್ಯಾವಳಿ ವಿಶೇಷವಾಗಿದೆ. ಈ ಕುಟುಂಬಗಳು ಉತ್ತಮ ಸಂಬಂಧವನ್ನು ಹೊಂದಿವೆ. ಕೊಡವರ ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳು ಅವರ ವಿಶೇಷ ಉಡುಗೆ-ತೊಡುಗೆಗಳು ಎಲ್ಲರನ್ನೂ ಒಂದುಗೂಡಿಸುತ್ತದೆ ಎಂದರು.
ಕಳೆದ 23 ವರ್ಷಗಳಿಂದ ಈ ಪಂದ್ಯಾವಳಿ ನಡೆಯುತ್ತಿರುವುದು ಸಂತಸ ತಂದಿದೆ. ಕುಟುಂಬಗಳು ಒಗ್ಗೂಡಬೇಕು, ಬಾಂಧವ್ಯ ವೃದ್ಧಿಯಾಗಬೇಕು. ಇದು ಭಾರತದ ಸಂಸ್ಕೃತಿ. ಇಂತಹ ಪಂದ್ಯಾವಳಿ ಜಗತ್ತಿನಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.