ಸ್ಟಾರ್ಟಪ್ ಪಾರ್ಕ್ ಸ್ಥಾಪನೆಯಿಂದ ನವೋದ್ಯಮಗಳ ಬೆಳವಣಿಗೆ - ಸಚಿವ ಅಶ್ವತ್ಥ ನಾರಾಯಣ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿದ 2023-24ರ ಬಜೆಟ್ ನಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಸ್ಟಾರ್ಟಪ್ ಪಾರ್ಕ್ ಸ್ಥಾಪನೆಯನ್ನು ಘೋಷಿಸಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ರಾಜ್ಯದಲ್ಲಿ ಇರುವ 25 ಸಾವಿರ ಸ್ಟಾರ್ಟಪ್ ಗಳ ಸದೃಢ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಐಟಿ ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಬಜೆಟ್ ಘೋಷಣೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 'ಇದು ರಾಜ್ಯದ ಯುವಜನರಲ್ಲಿ ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಬೆಳೆಸಲಿದೆ. ಜತೆಗೆ ಇದರಿಂದ ರಾಜ್ಯವು ಸ್ಟಾರ್ಟಪ್ ಗಳ ನೆಚ್ಚಿನ ತಾಣವಾಗಿ ಬೆಳೆಯಲು ಸಹಕಾರಿಯಾಗಲಿದೆ' ಎಂದಿದ್ದಾರೆ.
ರಾಜ್ಯ ಸರಕಾರವು ಸ್ಟಾರ್ಟಪ್ ಕಾರ್ಯ ಪರಿಸರ ಮತ್ತು ತಾಂತ್ರಿಕ ಮೂಲಸೌಕರ್ಯವನ್ನು ಮತ್ತಷ್ಟು ವಿಸ್ತರಿಸಲಿದೆ. ಇದಕ್ಕೆ ಬೇಕಾದ ಭೂಮಿ, ಯೋಜನಾ ವೆಚ್ಚ, ಅದರ ಅಭಿವೃದ್ಧಿಯ ಮಾದರಿ ಇತ್ಯಾದಿಗಳನ್ನು ಉದ್ಯಮ ಪರಿಣತರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಪಾರ್ಕ್ ಅಸ್ತಿತ್ವಕ್ಕೆ ಬಂದರೆ ಅಗ್ರಿಟೆಕ್, ಹವಾಮಾನ ತಂತ್ರಜ್ಞಾನ, ಡೀಪ್ ಟೆಕ್ ಕ್ಷೇತ್ರಗಳಿಗೆ ಬೇಕಾದ ಅಗತ್ಯ ಮೂಲಸೌಕರ್ಯ ನಿರ್ಮಾಣವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಉನ್ನತ ಶಿಕ್ಷಣಕ್ಕೆ ಮತ್ತಷ್ಟು ಬಲ
ಬಜೆಟ್ಟಿನಲ್ಲಿ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ, ಮುಖ್ಯಮಂತ್ರಿ ವಿದ್ಯಾಶಕ್ತಿ, ಹಳ್ಳಿಮುತ್ತು, ಅತ್ಯುತ್ತಮ ಸಾಧನೆ ತೋರುವ ವಿ.ವಿ.ಗಳಿಗೆ ತಲಾ 50 ಲಕ್ಷ ರೂಪಾಯಿ ಪ್ರೋತ್ಸಾಹಧನ ಮುಂತಾದ ಉಪಕ್ರಮಗಳಿಂದ ಉನ್ನತ ಶಿಕ್ಷಣ ಕ್ಷೇತ್ರದ ಬಲವರ್ಧನೆ ಆಗಲಿದೆ. ಶುಲ್ಕ ರಹಿತ ಶಿಕ್ಷಣ ದಿಂದ ಬಡವರಿಗೆ ಅನುಕೂಲ ಆಗಲಿದೆ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಉನ್ನತ ಶಿಕ್ಷಣ ಕೂಡ ಸ್ಥಳೀಯ ಭಾಷೆಯಲ್ಲೇ ನಡೆಯಬೇಕು ಎನ್ನುವುದು ಎನ್‌ಇಪಿ ಆಶಯವಾಗಿದೆ. ಇದಕ್ಕೆ ಪೂರಕವಾಗಿ ವಿ.ವಿ.ಗಳ ಮಟ್ಟದಲ್ಲಿ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅನುಕೂಲ ಆಗುವಂತೆ ಭಾಷಾಂತರ ಯೋಜನೆ ಘೋಷಿಸಲಾಗಿದೆ. ಇದರ ಜತೆಗೆ ಮಹಿಳೆಯರ ಸರಕಾರಿ ಡಿಗ್ರಿ ಕಾಲೇಜುಗಳು, ಪಾಲಿಟೆಕ್ನಿಕ್ ಮೂಲಸೌಕರ್ಯ ಅಭಿವೃದ್ಧಿಗೆ 'ವೃದ್ಧಿ' ಯೋಜನೆ ಮೂಲಕ ತಲಾ 2 ಕೋಟಿ ರೂಪಾಯಿ ಕೊಡಲಿರುವುದು ರಚನಾತ್ಮಕ ಕ್ರಮವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸಿಇಟಿ ಮೂಲಕ ಆಯ್ಕೆಯಾಗುವ ಗ್ರಾಮೀಣ ಪ್ರದೇಶದ 500 ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರಿಸುವ ಹಳ್ಳಿಮುತ್ತು ಯೋಜನೆಯಿಂದ ಶೈಕ್ಷಣಿಕ ಸಮಾನತೆ ಬರಲಿದೆ. ಜತೆಗೆ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡುತ್ತಿರುವುದು ಬಿಜೆಪಿ ಸರಕಾರದ ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಅವರು ನುಡಿದಿದ್ದಾರೆ.
ಮಿಕ್ಕಂತೆ ಒಂದು ಲಕ್ಷ ಮಹಿಳೆಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಕೊಡುವ ತೀರ್ಮಾನ ಮತ್ತು ಸ್ವಸಹಾಯ ಸಂಘಗಳಿಗೆ 500 ಕೋಟಿ ರೂಪಾಯಿ ಸಮುದಾಯ ನಿಧಿಯನ್ನು ನೀಡುತ್ತಿರುವುದು ರಾಜ್ಯದ ಮಾನವ ಸಂಪನ್ಮೂಲ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನಕಾರಿಯಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ